ರಾಜ್ಯ

ಮದರಸಾಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ: ಸಚಿವ ಜಮೀರ್ ಅಹಮದ್ ಖಾನ್

Manjula VN

ಬೆಂಗಳೂರು: ಮದರಸಾಗಳಲ್ಲಿ ವಿಜ್ಞಾನ, ಗಣಿತ, ಕನ್ನಡ ಮತ್ತು ಇಂಗ್ಲಿಷ್ ಸೇರಿದಂತೆ ಎಲ್ಲಾ ವಿಷಯಗಳನ್ನು ಬೋಧಿಸುವುದನ್ನು ಖಚಿತಪಡಿಸಬೇಕೆಂದು ಅಧಿಕಾರಿಗಳಿಗೆ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ಸೂಚನೆ ನೀಡಿದ್ದಾರೆ.

ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯದಲ್ಲಿ ಸೋಮವಾರ ನಡೆದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮದರಸಾಗಳಲ್ಲಿ ಕಡ್ಡಾಯವಾಗಿ ಕನ್ನಡ ಕಲಿಸಬೇಕು ಎಂದು ಸೂಚನೆ ನೀಡಿದರು.

ವಕ್ಫ್ ಬೋರ್ಡ್‌ನಲ್ಲಿ 1,265 ಮದರಸಾಗಳು ನೋಂದಣಿಯಾಗಿದ್ದು, ಅಧಿಕಾರಿಗಳು 100 ಮದರಸಾಗಳಲ್ಲಿ 5,000 ಮಕ್ಕಳಿಗೆ ಪ್ರಾಯೋಗಿಕ ಆಧಾರದ ಮೇಲೆ ಕನ್ನಡವನ್ನು ಬೋಧನೆ ಮಾಡಬೇಕು. ಮುಂದಿನ ವರ್ಷದಿಂದ ರಾಜ್ಯದಾದ್ಯಂತ ಎಲ್ಲಾ ಮದರಸಾಗಳಿಗೆ ಬೋಧನೆಯನ್ನು ಪ್ರಾರಂಭಿಸಬೇಕು. ಈ ಕುರಿತು ವಿವರವಾದ ಪ್ರಸ್ತಾವನೆಯನ್ನು ಸಿದ್ಧಪಡಿಸುವಂತೆ ಸೂಚಿಸಿದರು.

ಅಲ್ಪಸಂಖ್ಯಾತರ ನಿರ್ದೇಶನಾಲಯದ ಯೋಜನೆಯಡಿ ವಿದೇಶದಲ್ಲಿ ವ್ಯಾಸಂಗ ಮಾಡುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 20 ಲಕ್ಷ ರೂ.ಗಳ ಪ್ರೋತ್ಸಾಹಧನವನ್ನು 30 ಲಕ್ಷ ರೂ.ಗೆ ಹೆಚ್ಚಿಸಲು ಮತ್ತು ಐಐಟಿ, ಎನ್‌ಐಟಿ ಸೇರಿದಂತೆ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡುವ ಪ್ರೋತ್ಸಾಹಧನವನ್ನು ರೂ 2 ಲಕ್ಷದಿಂದ ರೂ 4 ಲಕ್ಷ ಹೆಚ್ಚಿಸುವಂತೆಯೂ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.

SCROLL FOR NEXT