ರಾಜ್ಯ

ಕಲಬುರಗಿ: ಸಚಿವರ ಬೆಂಬಲಿಗರಿಂದ ಆರೋಗ್ಯ ನಿರೀಕ್ಷಕನ ಮೇಲೆ ಹಲ್ಲೆ ಖಂಡಿಸಿ ಪಾಲಿಕೆ ಸಿಬ್ಬಂದಿ ಪ್ರತಿಭಟನೆ

Lingaraj Badiger

ಕಲಬುರಗಿ: ಟ್ರೇಡ್ ಲೈಸೆನ್ಸ್ ನೀಡುವ ವಿಚಾರವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಬೆಂಬಲಿಗರು ಕಲಬುರಗಿ ಮಹಾನಗರ ಪಾಲಿಕೆ ಆರೋಗ್ಯ ನಿರೀಕ್ಷಕ ಧನಶೆಟ್ಟಿ ಹೆಡಗಾಪುರಿ ಅವರ ಮೇಲೆ ಹಲ್ಲೆ ನಡೆಸಿರುವುದನ್ನು ಮಹಾನಗರ ಪಾಲಿಕೆ ಸಿಬ್ಬಂದಿ ಗುರುವಾರ ಖಂಡಿಸಿದ್ದಾರೆ.

ಕಲಬುರಗಿ ಮಹಾನಗರ ಪಾಲಿಕೆಯ ಸಿಬ್ಬಂದಿ ಹಾಗೂ ಅಧಿಕಾರಿಗಳು ಹಲ್ಲೆ ಖಂಡಿಸಿ ಇಂದು ಕಪ್ಪು ಬ್ಯಾಡ್ಜ್ ಧರಿಸಿ, ಕೆಲಸ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಪಾಟೀಲ್ ಭುವನೇಶ್ ದೇವಿದಾಸ್ ಅವರು ಮಾತನಾಡಿ, ಘಟನೆಯಲ್ಲಿ ರಾಜಕೀಯ ಬೇಡ, ಹಲ್ಲೆಕೋರರು ಯಾರೇ ಆಗಿದ್ದರೂ ಶಿಕ್ಷೆಯಾಗಬೇಕು ಎಂದರು.

ಈ ವಿಷಯವನ್ನು ಪೊಲೀಸ್ ಆಯುಕ್ತರ ಗಮನಕ್ಕೆ ತರಲಾಗಿದೆ ಎಂದು ದೇವಿದಾಸ್ ಅವರು ಪಾಲಿಕೆ ಸಿಬ್ಬಂದಿಗೆ ಭರವಸೆ ನೀಡಿದರು. ಈ ಘಟನೆಯು ನೌಕರರಲ್ಲಿ ಭಯ ಮತ್ತು ಆತಂಕವನ್ನು ಉಂಟುಮಾಡಿದೆ ಎಂದು ಅವರು ಹೇಳಿದರು. ಅಲ್ಲದೆ ಅವರ ಭದ್ರತೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಸಿಬ್ಬಂದಿ ಮತ್ತು ಅಧಿಕಾರಿಗಳ ಮೇಲೆ ಪದೇ ಪದೇ ಹಲ್ಲೆಗಳು ನಡೆಯುತ್ತಿವೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.

ಬುಧವಾರ ಸಂಜೆ ಕಲಬುರಗಿ ಮಹಾನಗರ ಪಾಲಿಕೆ ಆವರಣಕ್ಕೆ ನುಗ್ಗಿದ ಪ್ರಿಯಾಂಕ್ ಖರ್ಗೆ ಬೆಂಬಲಿಗರು ಆರೋಗ್ಯ ನಿರೀಕ್ಷಕರನ್ನು ಥಳಿಸಿದ್ದರು.

SCROLL FOR NEXT