ರಾಜ್ಯ

ಶ್ರೀಗಂಧದ ಮರ ಕಳವಿಗೆ ಯತ್ನ: ಆರೋಪಿಗಳ ಮೇಲೆ ಗುಂಡಿನ ದಾಳಿ; ಓರ್ವ ಸಾವು, ಮತ್ತೋರ್ವ ಪರಾರಿ

Ramyashree GN

ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಕಲ್ಕೆರೆ ಅರಣ್ಯ ಪ್ರದೇಶದಲ್ಲಿ ಬುಧವಾರ ರಾತ್ರಿ 1.15ರ ಸುಮಾರಿಗೆ ಶ್ರೀಗಂಧದ ಮರ ಕದಿಯಲು ಬಂದವರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಗುಂಡು ಹಾರಿಸಿದ್ದು, ಗುಂಡು ತಗುಲಿ ಆರೋಪಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಆರೋಪಿಯನ್ನು ತಿಮ್ಮರಾಯಪ್ಪ (28) ಎಂದು ಗುರುತಿಸಲಾಗಿದ್ದು, ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನವನು. ಶ್ರೀಗಂಧದ ಮರಗಳನ್ನು ಕದಿಯಲು ತನ್ನ ಸಹಚರನೊಂದಿಗೆ ಬಂದಿದ್ದ ಎನ್ನಲಾಗಿದೆ. ಸದ್ಯ ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ.

ವೀವರ್ಸ್‌ ಕಾಲೋನಿಗೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದಾಗ ಮರ ಕಡಿಯುವ ಶಬ್ದ ಕೇಳಿಸಿದೆ. ಆಗ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಇಬ್ಬರು ಆರೋಪಿಗಳು ಶ್ರೀಗಂಧದ ಮರವನ್ನು ಕಡಿಯುತ್ತಿರುವುದು ಕಂಡುಬಂದಿದೆ. ಆರೋಪಿಗಳನ್ನು ಶರಣಾಗುವಂತೆ ಸೂಚಿಸಿದ್ದಾರೆ. ಈ ವೇಳೆ ಇಬ್ಬರೂ ಪರಾರಿಯಾಗಲು ಯತ್ನಿಸಿದ್ದಾರೆ ಮತ್ತು ಮರ ಕಡಿಯುವ ಪರಿಕರಗಳಿಂದ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಅರಣ್ಯ ರಕ್ಷಕ ವಿನಯ್ ಕುಮಾರ್ ಗುಂಡು ಹಾರಿಸಿದ್ದಾರೆ. ಓರ್ವ ಆರೋಪಿ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.

ಶ್ರೀಗಂಧದ ಮರ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾಕಷ್ಟು ದೂರುಗಳು ಕೇಳಿಬಂದಿದ್ದರಿಂದ ಅರಣ್ಯದಲ್ಲಿ ಗಸ್ತು ತೀವ್ರಗೊಳಿಸಲಾಗಿತ್ತು. ಪರಾರಿಯಾಗಿರುವ ಆರೋಪಿಯ ವಿವರ ಇನ್ನಷ್ಟೇ ತಿಳಿದುಬರಬೇಕಿದೆ.

ಆರೋಪಿಗಳನ್ನು ಅರಣ್ಯ ರಕ್ಷಕರು ಮತ್ತು ಕಾವಲುಗಾರರು ಸುತ್ತುವರೆದಿದ್ದರು. ಶರಣಾಗುವಂತೆ ಹೇಳಿದಾಗ ಆರೋಪಿಗಳು ಮಚ್ಚಿನಿಂದ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾರೆ. ಆದರೂ, ಆರೋಪಿಗಳು ಮತ್ತೆ ದಾಳಿಗೆ ಯತ್ನಿಸಿದಾಗ, ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಈ ವೇಳೆ ಓರ್ವ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಬನ್ನೇರುಘಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

SCROLL FOR NEXT