ರಾಜ್ಯ

ಬೀದರ್‌: ಪ್ರವಾಸೋದ್ಯಮ ಸರ್ಕ್ಯೂಟ್‌ ಬಸ್‌ಗೆ ಸಿಎಂ ಸಿದ್ದರಾಮಯ್ಯ ಚಾಲನೆ

Manjula VN

ಬೀದರ್: ಬೀದರ್ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಉತ್ತೇಜನ ನೀಡುವ ಬಹಮನಿ–ರಾಷ್ಟ್ರಕೂಟ–ಚಾಲುಕ್ಯ ಸರ್ಕ್ಯೂಟ್‌ ವಾಹನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಚಾಲನೆ ನೀಡಿದರು.

ಈ ವಾಹನವು ಮೂರು ದಿನಗಳವರೆಗೆ ಧಾರ್ಮಿಕ, ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳಿಗೆ ಸಂಚರಿಸಲಿದೆ. ಒಬ್ಬ ವ್ಯಕ್ತಿಗೆ ರೂ.8,200, ಇಬ್ಬರಿಗೆ ರೂ.5950 ಹಾಗೂ ಮೂವರಿಗೆ ರೂ.5650 ದರ ನಿಗದಿಪಡಿಸಲಾಗಿದೆ. ಮೊದಲ ದಿನ ಬೆಳಿಗ್ಗೆ 7.30ಕ್ಕೆ ಬೀದರ್‌ನ ನರಸಿಂಹ ಝರಣಿಯಿಂದ ಪಯಣ ಬೆಳೆಸುವ ವಾಹನ ಬಸವಕಲ್ಯಾಣ, ಯಾದಗಿರಿಯ ಪ್ರಮುಖ ಸ್ಥಳಗಳಲ್ಲಿ ಸಂಚರಿಸಿ ರಾತ್ರಿ ಅಲ್ಲೇ ಇರಲಿದೆ.

ಎರಡನೇ ದಿನ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ, ಕೂಡಲಸಂಗಮ, ಆಲಮಟ್ಟಿ, ಬಾದಾಮಿ, ಬನಶಂಕರಿ, ಮಹಾಕೂಟ, ಐಹೊಳೆ ಭೇಟಿ ನೀಡಲಿದೆ. ಮಾರನೇ ದಿನ ಪುನಃ ಬೀದರ್‌ ಬಂದು ಸೇರಲಿದೆ.

ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್, ಅರಣ್ಯ, ಪರಿಸರ, ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಮತ್ತು ಹಜ್ ಸಚಿವ ರಹೀಮ್ ಖಾನ್, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್, ಪ್ರವಾಸೋದ್ಯಮ ಇಲಾಖೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಇದೇ ವೇಳೆ ಭಾಲ್ಕಿ ಪಟ್ಟಣದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಭೀಮಣ್ಣ ಖಂಡ್ರೆ ಅವರ 100ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಭಾಗಿಯಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ವೇಳೆ ಸಾರ್ವಜನಿಕರ ಕುಂದುಕೊರತೆಗಳ ಆಲಿಸಿ, ಮನವಿ ಪತ್ರಗಳ ಸ್ವೀಕರಿಸಿದರು.

SCROLL FOR NEXT