ರಾಜ್ಯ

ರೈತರ ನೆರವಿಗೆ 10 ಸಾವಿರ ಕೋಟಿ ರೂ. ನೀಡಿ: ಸರ್ಕಾರಕ್ಕೆ ಬಿಜೆಪಿ ಎಂಎಲ್ ಸಿ ಪೂಜಾರಿ ಆಗ್ರಹ

Manjula VN

ಬೆಳಗಾವಿ: ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಬಿಜೆಪಿ ಶಾಸಕ ಕೋಟ ಶ್ರೀನಿವಾಸ ಪೂಜಾರಿ ಅವರು, ರೈತರ ನೆರವಿಗೆ ಕೂಡಲೇ 10 ಸಾವಿರ ಕೋಟಿ ಬರ ಪರಿಹಾರ ಪ್ಯಾಕೇಜ್ ಘೋಷಿಸಬೇಕು ಇಲ್ಲವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿದ್ದಾರೆ.

ಸೋಮವಾರ ವಿಧಾನ ಪರಿಷತ್ತಿನಲ್ಲಿ ರಾಜ್ಯದಲ್ಲಿನ ಬರಗಾಲದ ಕುರಿತ ಚರ್ಚೆ ವೇಳೆ ಮಾತನಾಡಿದ ಅವರು, ರಾಜ್ಯ ಸರ್ಕಾರ ರೈತರ ಪರವಾಗಿ ಕೆಲಸ ಮಾಡುವ ಬದಲು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವಲ್ಲಿ ನಿರತವಾಗಿದೆ ಎಂದು ಕಿಡಿಕಾರಿದರು.

ಅನುದಾನ ನೀಡುವುದು ಕೇಂದ್ರದ ಜವಾಬ್ದಾರಿ ಹೌದು, ಆದರೆ, ರಾಜ್ಯ ಸರ್ಕಾರ ಮೊದಲು ತನ್ನ ಪಾಲಿನ ಕೆಲಸವನ್ನು ಮಾಡಬೇಕು ಎಂದು ಹೇಳಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಿದಾಗ, ಆಗಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕೇಂದ್ರದ ನೆರವಿಗಾಗಿ ಕಾಯುತ್ತಾ ಕುಳಿತಿರಲಿಲ್ಲ. ನೆರೆ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡು ರೂ. ಹಾನಿಗೊಳಗಾದ ಪ್ರತಿ ಮನೆಗೆ 5 ಲಕ್ಷ ರೂ ನೀಡಿದ್ದರು. ಈಗ ಅದೇ ರೀತಿ ಕಾಂಗ್ರೆಸ್ ಸರ್ಕಾರಕ್ಕೆ ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು.

ಹುಲಿ ದಾಳಿ ವಿಷಯ ಪ್ರಸ್ತಾಪಿಸಿ ಬರಗಾಲದಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಕಾಂಗ್ರೆಸ್ ಸರಕಾರ ಯತ್ನಿಸುತ್ತಿದೆ ಎಂದು ಇದೇ ವೇಳೆ ಆರೋಪಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ 17 ಸಾವಿರ ಬೋರ್‌ವೆಲ್‌ ಕೊರೆಸಲು ಆದೇಶ ನೀಡಿಕ್ಕು, ಈ ಆದೇಶವನ್ನು ಸರ್ಕಾರ ಹಿಂಪಡೆದಿದೆ. ಈ ಆದೇಶ ರೈತರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ತಿಳಿಸಿದರು.

ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಆರ್‌ಡಿಪಿಆರ್ ಸಚಿವ ಪ್ರಿಯಾಂಕ್ ಖರ್ಗೆ ಅವರು, ಹಲವಾರು ಅಕ್ರಮಗಳಿಂದಾಗಿ ಕಾಂಗ್ರೆಸ್ ಸರ್ಕಾರ ಆದೇಶವನ್ನು ಹಿಂಪಡೆದುಕೊಂಡು, ತನಿಖೆಗೆ ಆದೇಶಿಸಬೇಕಾಯಿತು ಎಂದು ಹೇಳಿದರು.

ಬೋರೆವೆಲ್ ಕೊರೆಯುವ ಹೆಸರಿನಲ್ಲಿ ಕೆಲವರು ನಕಲಿ ದಾಖಲೆಗಳನ್ನು ತೋರಿಸಿ ಹಣ ಪಡೆದಿದ್ದಾರೆಂದು ತಿಳಿಸಿದರು.

ಈವೇಳೆ ಮಾತನಾಡಿದ ಹೊರಟ್ಟಿಯವರು, ಮಂಗಳವಾರವೂ ಈ ಕುರಿತು ಚರ್ಚೆ ನಡೆಸಲಾಗುವುದು ಎಂದು ಹೇಳಿದರು.

SCROLL FOR NEXT