ರಾಜ್ಯ

ಬಿಜೆಪಿ ಮುಖಂಡನಿಗೆ ಚೂರಿ ಇರಿತ: ಆರೋಪಿಗಳ ಕೂಡಲೇ ಬಂಧಿಸಿ; ಸಿಎಂ ಸಿದ್ದರಾಮಯ್ಯಗೆ ವಿಜಯೇಂದ್ರ ಆಗ್ರಹ

Manjula VN

ಬೆಳಗಾವಿ: ಬಿಜೆಪಿ ಮುಖಂಡ ಪೃಥ್ವಿ ಸಿಂಗ್‌ಗೆ ಚಾಕುವಿನಿಂದ ಇರಿದ ಘಟನೆಗೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರ (ಚನ್ನರಾಜ್ ಹಟ್ಟಿಹೊಳಿ)ನನ್ನು ಕೂಡಲೇ ಬಂಧನಕ್ಕೊಳಪಡಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.

ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೃಥ್ವಿ ಸಿಂಗ್ ಅವರನ್ನು ನಿನ್ನೆ ವಿಜಯೇಂದ್ರ ಅವರು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ಚನ್ನರಾಜ್ ಹಟ್ಟಿಹೊಳಿ ಅವರ ಗನ್‌ಮ್ಯಾನ್ ಹಾಗೂ ಅವರ ಬಲಗೈ ಬಂಟ ಇಬ್ಬರೂ ಪೃಥ್ವಿ ಸಿಂಗ್‌ ಅವರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಹಟ್ಟಿಹೊಳಿ ಪ್ರಭಾವಿ ವ್ಯಕ್ತಿಯಾಗಿದ್ದು, ಹೀಗಾಗಿಯೇ ಹಗಲು ಹೊತ್ತಿನಲ್ಲಿ ಈ ರೀತಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದರು.

ಬೆಳಗಾವಿಯಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಹೊತ್ತಿನಲ್ಲೇ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿರುವುದು ದುರಾದೃಷ್ಟಕರ ಸಂಗತಿ. ಪೃಥ್ವಿ ಸಿಂಗ್ ಅವರ ಮೇಲಿನ ಹಲ್ಲೆಗೆ ಕಾರಣರಾದವರನ್ನು ಕೂಡಲೇ ಸರ್ಕಾರ ಬಂಧಿಸಬೇಕು. ಈ ವಿಷಯದ ಬಗ್ಗೆ ಹೇಳಿಕೆಗಳನ್ನು ನೀಡುವ ಬದಲು, ಜವಾಬ್ದಾರಿಯುತ ಸಚಿವೆಯಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ತಮ್ಮ ಸಹೋದರನನ್ನು ತಕ್ಷಣವೇ ಪತ್ತೆಹಚ್ಚಿ ಬಂಧಿಸುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

SCROLL FOR NEXT