ರಾಜ್ಯ

‘ಲಿಡ್ಕರ್’ಗೆ ರಾಯಭಾರಿಯಾಗಿ ಡಾಲಿ ಧನಂಜಯ ನೇಮಕ: ಸಿಎಂ ಸಿದ್ದರಾಮಯ್ಯ ಅಧಿಕೃತ ಘೋಷಣೆ

Srinivasamurthy VN

ಬೆಂಗಳೂರು: ಲಿಡ್ಕರ್ ಉತ್ಪನ್ನಗಳಿಗೆ ನಟ ಡಾಲಿ ಧನಂಜಯ್ ರಾಯಭಾರಿ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ (Siddaramaiah) ಬುಧವಾರ ಘೋಷಣೆ ಮಾಡಿದರು.

ಬೆಂಗಳೂರಿನ ವಿಧಾನಸೌಧದ ಮುಂದೆ ನಡೆದ ಡಾ.ಬಿ ಆರ್ ಅಂಬೇಡ್ಕರ್ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಲಿಡ್ಕರ್ ಉತ್ಪನ್ನಕ್ಕೆ ಡಾಲಿ ಧನಂಜಯ ರಾಯಭಾರಿಯಾಗಿ ಘೋಷಣೆ ಮಾಡಲಾಗಿದೆ. ಈ ವೇಳೆ ಸಿಎಂ ಸಿದ್ದರಾಮಯ್ಯ, ಸಚಿವರಾದ ಹೆಚ್ ಸಿ ಮಹದೇವಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಡಾ.ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ (ಲಿಡ್ಕರ್)ಕ್ಕೆ (Lidkar) ಇದೇ ಮೊದಲ ಬಾರಿಗೆ ರಾಯಭಾರಿಯನ್ನ (Ambassador) ಆಯ್ಕೆ ಮಾಡಿದೆ. ಖ್ಯಾತ ನಟ‌ ಡಾಲಿ ಧನಂಜಯ್ (Dolly Dhananjay) ಲಿಡ್ಕರ್ ಗೆ  ರಾಯಭಾರಿ ಆಗಿದ್ದಾರೆ. ಮೊದಲ ಬಾರಿಗೆ ಡಾಲಿ ಸರ್ಕಾರದ ಜಾಹೀರಾತಿನಲ್ಲಿ ಮಿಂಚುವ ಮೂಲಕ ಲಿಡ್ಕರ್ ಬ್ರಾಂಡ್ ಪ್ರಮೋಟ್ ಮಾಡಲಿದ್ದಾರೆ.

ಲಿಡ್ಕರ್ ನಲ್ಲಿ 50 ಸಾವಿರಕ್ಕೂ ಹೆಚ್ಚು ಚರ್ಮ ಕುಶಲಕರ್ಮಿಗಳ ಕುಟುಂಬವಿದ್ದು, ಚರ್ಮ ಕೈಗಾರಿಕೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಮುಂದಾಗಿರುವ ಸರ್ಕಾರ ಸ್ಯಾಂಡಲ್‌ವುಡ್ ಸ್ಟಾರ್ ಧನಂಜಯ್ ಅವರನ್ನು ರಾಯಾಭಾರಿಯಾಗಿ ನೇಮಕಮಾಡಿದೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲಿಡ್ಕರ್ ವ್ಯವಸ್ಥಾಪಕ ನಿರ್ದೇಶಕಿ ಕೆ.ಎಂ.ಎಸ್ ವಸುಂಧರಾ, ಧನಂಜಯ್ ಅವರು ರಾಯಭಾರಿಯಾಗಿದ್ದು ತುಂಬಾ ಖುಷಿ ಇದೆ. ಅವರು ಸ್ಯಾಂಡಲ್‌ವುಡ್‌ನ ಲೀಡಿಂಗ್ ನಟ ಎಲ್ಲಾ ವರ್ಗದ ಜನರಿಗೆ ತಲುಪುವ ಕಲಾವಿದ ಹಾಗಾಗಿ ಅವರನ್ನ ಆಯ್ಕೆ ಮಾಡಿದ್ದೇವೆ. ಸಚಿವರು ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದ್ದು ಆದಷ್ಟು ಬೇಗ ಜಾಹೀರಾತಿನ ಚಿತ್ರೀಕರಣ ನಡೆಯಲಿದೆ ಎಂದಿದ್ದಾರೆ.
 

SCROLL FOR NEXT