ರಾಜ್ಯ

ಗಾಂಧೀಜಿ ಹಂತಕರು ಅನುಸರಿಸಿದ ಸಿದ್ಧಾಂತವನ್ನು ನಾನು ಒಪ್ಪಲಾರೆ, ಸಭಾಧ್ಯಕ್ಷರ ತೀರ್ಮಾನಕ್ಕೆ ಬದ್ಧ: ಪ್ರಿಯಾಂಕ್ ಖರ್ಗೆ

Srinivasamurthy VN

ಬೆಳಗಾವಿ: ಗಾಂಧೀಜಿ ಹಂತಕರು ಅನುಸರಿಸಿದ ಸಿದ್ಧಾಂತವನ್ನು ನಾನು ಒಪ್ಪಲಾರೆ, ಸಭಾಧ್ಯಕ್ಷರ ತೀರ್ಮಾನಕ್ಕೆ ಬದ್ಧ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಬೆಳಗಾವಿಯ ಸುವರ್ಣ ಸೌಧದಿಂದ ವೀರ ಸಾವರ್ಕರ್ ಅವರ ಭಾವಚಿತ್ರವನ್ನು ತೆಗೆಯಬೇಕೆಂಬ ಬೇಡಿಕೆಯನ್ನು ಪ್ರಿಯಾಂಕ್ ಖರ್ಗೆ ಗುರುವಾರ ಪುನರುಚ್ಚರಿಸಿದರು.  ಈ ವೇಳೆ ಮಾತನಾಡಿದ ಅವರು“ಗಾಂಧೀಜಿ ಹಂತಕರು ಅನುಸರಿಸಿದ ಸಿದ್ಧಾಂತವನ್ನು ನಾನು ಒಪ್ಪಲಾರೆ. ಸಾವರ್ಕರ್ ಅವರ ಭಾವಚಿತ್ರ ತೆಗೆಯಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ನನ್ನ ಕೈಯಲ್ಲಿದ್ದಿದ್ದರೆ ಇವತ್ತೇ ತೆಗೆಯುತ್ತಿದ್ದೆ. ಈ ಬಗ್ಗೆ ಸಭಾಧ್ಯಕ್ಷರು ತೀರ್ಮಾನಿಸಬೇಕು. ಅವರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ ಎಂದರು.

ಅಂತೆಯೇ ಸಾವರ್ಕರ್ ಭಾವಚಿತ್ರ ತೆರವಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಬಿಜೆಪಿ ನಾಯಕರಿಗೆ ಪ್ರಶ್ನೆ ಕೇಳಿದ ಖರ್ಗೆ, “ಕಳೆದ ಬಾರಿ ನಾನು ಬಿಜೆಪಿ ನಾಯಕರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದೆ. ಆ ಪ್ರಶ್ನೆಗಳಿಗೆ ಅವರು ಇನ್ನೂ ಉತ್ತರಿಸಿಲ್ಲ. ಸಾವರ್ಕರ್‌ಗೆ ವೀರ್ ಎಂಬ ಬಿರುದನ್ನು ನೀಡಿದವರು ಯಾರು? ಸಾವರ್ಕರ್ ಬ್ರಿಟಿಷರಿಂದ ಪಿಂಚಣಿ ಪಡೆದಿದ್ದಾರಾ? ಬ್ರಿಟಿಷರಿಗೆ ಕ್ಷಮಾದಾನ ಪತ್ರ ಬರೆದಿದ್ದಾರಾ? ಸುಭಾಷ್ ಚಂದ್ರ ಬೋಸ್ ಐಎನ್ಎ ಕಟ್ಟುತ್ತಿದ್ದಾಗ ಸಾವರ್ಕರ್ ಅವರ ವಿರುದ್ಧ ಕೆಲಸ ಮಾಡಿದ್ದಾರಾ? ಮತ್ತು ಗೋಮಾತೆಯ ಬಗ್ಗೆ ಸಾವರ್ಕರ್ ಅವರ ಅಭಿಪ್ರಾಯವೇನು? ಅವರು ಮೊದಲು ಈ ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಖರ್ಗೆ ಹೇಳಿದರು.

ಕಳೆದ ವರ್ಷ ಡಿಸೆಂಬರ್ 19 ರಂದು, ಬೆಳಗಾವಿಯ ಕರ್ನಾಟಕ ವಿಧಾನಸಭಾ ಭವನದಲ್ಲಿ ಹಿಂದುತ್ವ ಸಿದ್ಧಾಂತವಾದಿ ವಿಡಿ ಸಾವರ್ಕರ್ ಅವರ ಜೀವನ ಗಾತ್ರದ ಭಾವಚಿತ್ರವನ್ನು ಅನಾವರಣಗೊಳಿಸಲಾಗಿತ್ತು. ಇದು ರಾಜ್ಯವನ್ನು ಕಾಡುತ್ತಿರುವ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ಎಂದು ಪ್ರತಿಪಕ್ಷ ಕಾಂಗ್ರೆಸ್ ನಿಂದ ಟೀಕೆಗೆ ಗುರಿಯಾಯಿತು. ಅಂದಿನ ಸರ್ಕಾರ ಸ್ವಾಮಿ ವಿವೇಕಾನಂದ, ಸುಭಾಷ್ ಚಂದ್ರ ಬೋಸ್, ಬಿ ಆರ್ ಅಂಬೇಡ್ಕರ್, ಬಸವಣ್ಣ, ಮಹಾತ್ಮ ಗಾಂಧಿ ಮತ್ತು ವಲ್ಲಭಭಾಯಿ ಪಟೇಲ್ ಅವರ ಭಾವಚಿತ್ರದೊಂದಿಗೆ ಸಾವರ್ಕರ್ ಅವರ ಭಾವಚಿತ್ರವನ್ನು ಅನಾವರಣಗೊಳಿಸಿತ್ತು.
 

SCROLL FOR NEXT