ಬೆಂಗಳೂರು: ಕನ್ನಡ ಚಿತ್ರರಂಗ ಹಿರಿಯ ನಟಿ ಲೀಲಾವತಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಶನಿವಾರ ಮುಂಜಾನೆ 5 ಗಂಟೆಯಿಂದ ನೆಲಮಂಗಲದಲ್ಲಿ ಆರಂಭವಾಗಿದ್ದು, ಸಾರ್ವಜನಿಕರು ಮತ್ತು ಅವರ ಹಿತೈಷಿಗಳು ಬಂದು ದರ್ಶನ ಪಡೆಯುತ್ತಿದ್ದಾರೆ.
ಇಂದು ಬೆಳಗ್ಗೆ 5:30 ರಿಂದ 10:45ರವರೆಗೂ ನೆಲಮಂಗಲದ ಡಾ.ಆರ್.ಅಂಬೇಡ್ಕರ್ ಅವರ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಿನೋದ್ ರಾಜ್ ಅವರ ಒಪ್ಪಿಗೆ ಮೇರೆಗೆ 11 ಗಂಟೆಯಿಂದ 2:30 ರವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಬಯಲು ರಂಗಮಂದಿರದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ನಂತರ ಮಧ್ಯಾಹ್ನ 3.30 ರ ಸುಮಾರಿಗೆ ಸೋಲದೇವನಹಳ್ಳಿಯಲ್ಲಿರುವ ಲೀಲಾವತಿ ಅವರ ತೋಟದಲ್ಲಿ ಸರ್ಕಾರಿ ಸಕಲ ಗೌರವದೊಂದಿಗೆ ಅಂತಿಮ ಸಂಸ್ಕಾರ ಮಾಡುವುದಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶಿವಶಂಕರ್ ತಿಳಿಸಿದ್ದಾರೆ.
ಇದನ್ನೂ ಓದಿ: ರವೀಂದ್ರ ಕಲಾಕ್ಷೇತ್ರದಲ್ಲಿ ನಟಿ ಲೀಲಾವತಿ ಪಾರ್ಥಿವ ಶರೀರ ಅಂತಿಮ ದರ್ಶನಕ್ಕೆ ವ್ಯವಸ್ಥೆ; ಮಧ್ಯಾಹ್ನದ ಬಳಿಕ ಅಂತ್ಯಕ್ರಿಯೆ
ನೆಲಮಂಗಲದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಮಗ ವಿನೋದ್ ರಾಜ್ ಸೇರಿದಂತೆ ಕುಟುಂಬದ ಹಿತೈಷಿಗಳು ಸ್ಥಳದಲ್ಲಿ ಹಾಜರಿದ್ದಾರೆ.
ಅಗಲಿದ ಹಿರಿಯ ಚೇತನ ಲೀಲಾವತಿ ಅವರ ಅಂತಿಮ ದರ್ಶನ ಪಡೆಯಲು ಚೆನ್ನೈನಿಂದ ಲೀಲಾವತಿ ಅವರ ಸೊಸೆ, ಅಂದರೆ ವಿನೋದ್ ರಾಜ್ ಅವರ ಪತ್ನಿ ಅನು ಮತ್ತು ಲೀಲಾವತಿ ಮೊಮ್ಮಗ ಯುವರಾಜ್ ಆಗಮಿಸಿದ್ದಾರೆ. ನಿನ್ನೆ ರಾತ್ರಿಯೇ ಅವರು ಚೆನ್ನೈನಿಂದ ಹೊರಟು ನೆಲಮಂಗಲ ತಲುಪಿ, ಇಂದು ಅಂತಿಮ ದರ್ಶನ ಪಡೆದಿದ್ದಾರೆ.
ವಿನೋದ್ ರಾಜ್ ಅವರ ಮದುವೆ ವಿಚಾರವಾಗಿ ಈ ಹಿಂದೆ ಹಲವಾರು ಗೊಂದಲಗಳು ಮೂಡಿದ್ದವು. ತಾಯಿಗಾಗಿ ವಿನೋದ್ ಮದುವೆ ಆಗದೇ, ತಾಯಿಯ ಸೇವೆಯಲ್ಲಿದ್ದಾರೆ ಎಂದು ಹೇಳಲಾಗಿತ್ತು. ಇತ್ತೀಚೆಗಷ್ಟೇ ವಿನೋದ್ ರಾಜ್ ಮದುವೆ ಆಗಿರುವ ಸುದ್ದಿಯನ್ನು ನಿರ್ದೇಶಕರೊಬ್ಬರು ಫೋಟೋ ಸಮೇತ ವಿವರಿಸಿದ್ದರು. ವಿನೋದ್ ರಾಜ್ ಮದುವೆ ವಿಚಾರವನ್ನು ಸ್ವತಃ ಲೀಲಾವತಿ ಮತ್ತು ವಿನೋದ್ ರಾಜ್ ಕೂಡ ಒಪ್ಪಿಕೊಂಡಿದ್ದರು.