ರಾಜ್ಯ

ಲೋಕ ಅದಾಲತ್‌: 25 ಲಕ್ಷಕ್ಕೂ ಅಧಿಕ ಪ್ರಕರಣ ಇತ್ಯರ್ಥ

Manjula VN

ಬೆಂಗಳೂರು: ರಾಜ್ಯದಾದ್ಯಂತ ಕಳೆದ ಶನಿವಾರ ನಡೆಸಿದ ರಾಷ್ಟ್ರೀಯ ಲೋಕ್‌ ಅದಾಲತ್​ನಲ್ಲಿ 25 ಲಕ್ಷಕ್ಕೂ ಅಧಿಕ ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿದೆ.

ಒಟ್ಟು ರೂ.1,569 ಕೋಟಿ ಪರಿಹಾರವನ್ನು ಕಕ್ಷಿದಾರರಿಗೆ ಪರಿಹಾರ ರೂಪದಲ್ಲಿ ನೀಡಲಾಗಿದೆ ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ಹೈಕೋರ್ಟ್ ನ್ಯಾಯಮೂರ್ತಿ ಪಿ ಎಸ್‌ ದಿನೇಶ್‌ ಕುಮಾರ್‌ ತಿಳಿಸಿದ್ದಾರೆ.

ಹೈಕೋರ್ಟ್‌ನ ಕಾನೂನು ಸೇವಾ ಪ್ರಾಧಿಕಾರದ ಸಭಾಂಗಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶನಿವಾರ ಹೈಕೋರ್ಟ್‌ನ ಮೂರು ಪೀಠಗಳು ಸೇರಿದಂತೆ ರಾಜ್ಯಾದ್ಯಂತ ಒಟ್ಟು 1,022 ಪೀಠಗಳು ಅದಾಲತ್​ ನಡೆಸಿದ್ದವು. ಈ ವೇಳೆ ನ್ಯಾಯಾಲಯದಲ್ಲಿ ಬಾಕಿಯಿದ್ದ 2,24,080 ಪ್ರಕರಣಗಳು ಹಾಗೂ 22,90,263 ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿ ಒಟ್ಟು 25,14,343 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದು ಹೇಳಿದರು.

ಅಲ್ಲದೆ, ಒಟ್ಟು 1,358 ವೈವಾಹಿಕ ಪ್ರಕರಣಗಳನ್ನು ಇತ್ಯರ್ಥಪಡಿಸಿ, 262 ದಂಪತಿ ಮತ್ತೆ ಒಂದುಗೂಡಿಸಿರುವುದು (ಪುನರ್‌ಮಿಲನ) ಈ ಬಾರಿಯ ಅದಾಲತ್​ನ ಮತ್ತೊಂದು ವಿಶೇಷವಾಗಿದೆ ಎಂದು ತಿಳಿಸಿದರು.

ಅದಲಾತ್‌ಗೆ ಸುಮಾರು 30 ಲಕ್ಷ ಪ್ರಕರಣಗಳನ್ನು ಗುರುತಿಸಲಾಗಿತ್ತು. ಆ ಪೈಕಿ 25 ಲಕ್ಷಕ್ಕೂ ಅಧಿಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಉಳಿದ ಅಂದಾಜು ಐದು ಲಕ್ಷ ಪ್ರಕರಣಗಳು ಕಾರಣಾಂತರಗಳಿಂದ ವಿಲೇವಾರಿ ಮಾಡಲಾಗಲಿಲ್ಲ. ಹೈಕೋರ್ಟ್‌ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾದ ನ್ಯಾಯಮೂರ್ತಿ ಡಾ.ಎಚ್‌.ಬಿ. ಪ್ರಭಾಕರ ಶಾಸ್ತ್ರಿ ಅವರು ಬೆಂಗಳೂರು ಪೀಠದಲ್ಲಿ ಲೋಕ್‌ ಅದಾಲತ್‌ನ ನೇತೃತ್ವ ವಹಿಸಿ 1,087 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದಾರೆ. ನ್ಯಾಯಮೂರ್ತಿ ಎಸ್‌ ಸುನಿಲ್‌ ದತ್‌ ಯಾದವ್‌ ಮತ್ತು ನ್ಯಾಂಯಾಂಗೇತರ ಸಂಧಾನಕಾರ ಶ್ರೀವತ್ಸ ಹೆಗ್ಡೆ ಅವರನ್ನು ಒಳಗೊಂಡ ಪೀಠವು 22 ತಕರಾರು ಅರ್ಜಿಗಳನ್ನು ವಿಲೇವಾರಿ ಮಾಡಿತು ಎಂದು ವಿವರಿಸಿದರು.

10 ಸಾವಿರ ಚೆಕ್‌ಬೌನ್ಸ್‌ ಪ್ರಕರಣ ವಿಲೇವಾರಿ
ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳಲ್ಲಿ 4,031 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು, ಒಟ್ಟು ರೂ.209 ಕೋಟಿಗಳನ್ನು ಸಂತ್ರಸ್ತರಿಗೆ ಪರಿಹಾರದ ರೂಪದಲ್ಲಿ ಕೊಡಿಸಲಾಗಿದೆ. 10,513 ಚೆಕ್​ ಬೌನ್ಸ್, 3,125 ವಿಭಾಗ ದಾವೆ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.

522 ಭೂಸ್ವಾಧೀನ ಅಮಲ್ಜಾರಿ (ಎಲ್‌ಎಸಿ ಎಕ್ಸಿಕ್ಯೂಷನ್‌) ಪ್ರಕರಣಗಳಲ್ಲಿ ಇತ್ಯರ್ಥ ಪಡಿಸಿದ್ದು, ರೂ.120 ಕೋಟಿಗಳ ಪರಿಹಾರ ವಿತರಣೆ ಮಾಡಲಾಗಿದೆ. 839 ಮೋಟಾರು ವಾಹನ ಅಮಲ್ಜಾರಿ ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು, ರೂ.51 ಕೋಟಿಗಳ ಪರಿಹಾರ ವಿತರಣೆ ಮಾಡಲಾಗಿದೆ. ಇತರೆ 3,290 ಅಮಲ್ಜಾರಿ ಪ್ರಕರಣಗಳು ಇತ್ಯರ್ಥವಾಗಿದ್ದು, ರೂ.124 ಕೋಟಿ ಪರಿಹಾರ ವಿತರಣೆ ಮಾಡಲಾಗಿದೆ. 28 ರೇರಾ ಪ್ರಕರಣಗಳ ರೂ.32 ಲಕ್ಷ ಪರಿಹಾರ, 88 ಗ್ರಾಹಕರ ವ್ಯಾಜ್ಯಗಳ ಪ್ರಕರಣಗಳಲ್ಲಿ ರೂ.2.47 ಕೋಟಿ ಪರಿಹಾರ ನೀಡಲಾಗಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು.

SCROLL FOR NEXT