ರಾಜ್ಯ

ಕಲಬುರಗಿ: ಸಹೋದ್ಯೋಗಿಗಳಿಂದಲೇ ಮಹಿಳಾ ಪೊಲೀಸ್ ಪೇದೆಯ ಸಿಡಿಆರ್ ಸೋರಿಕೆ, ಕಿರುಕುಳ ಪ್ರಕರಣ ದಾಖಲು

Ramyashree GN

ಕಲಬುರಗಿ: ಆಘಾತಕಾರಿ ಪ್ರಕರಣದಲ್ಲಿ, ಕಲಬುರಗಿ ನಗರದಲ್ಲಿ ಮಹಿಳಾ ಪೊಲೀಸ್ ಪೇದೆಯೊಬ್ಬರ ಕರೆ ವಿವರಗಳ ವರದಿಯನ್ನು (ಸಿಡಿಆರ್) ಸಹ ಪೋಲೀಸರು ಆಕೆಗೆ ಕಿರುಕುಳ ನೀಡುತ್ತಿದ್ದ ದುಷ್ಕರ್ಮಿಗೆ ಸೋರಿಕೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಂತ್ರಸ್ತ ಮಹಿಳಾ ಪೊಲೀಸ್ ಪೇದೆ, ಕಲಬುರಗಿ ನಗರದ ಪೊಲೀಸ್ ಕಮಿಷನರ್ ಆರ್ ಚೇತನ್ ಕುಮಾರ್ ಅವರಿಗೆ ದೂರು ಸಲ್ಲಿಸಿ, ತನಗೆ ಮಾನಸಿಕವಾಗಿ ಹಿಂಸೆ ನೀಡುತ್ತಿರುವ ಮತ್ತು ತನ್ನ ಖಾಸಗಿತನವನ್ನು ಉಲ್ಲಂಘಿಸಿದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಕಲಬುರಗಿ ನಗರದ ಪೊಲೀಸ್ ಠಾಣೆಯ ಇಬ್ಬರು ಪೊಲೀಸರು ಸಂತ್ರಸ್ತೆಯ ಸಿಡಿಆರ್ ವಿವರಗಳನ್ನು ಪಡೆದು ಖಾಸಗಿ ವ್ಯಕ್ತಿಗೆ ಹಸ್ತಾಂತರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕರೆ ವಿವರಗಳನ್ನು ಪಡೆದುಕೊಂಡ ನಂತರ, ಮಹಿಳೆಗೆ ಕಿರುಕುಳ ನೀಡಲು ಆರಂಭಿಸಿದ್ದಾರೆ ಎಂದು ವರದಿಯಾಗಿದೆ.

ಅಪರಾಧಗಳು ಮತ್ತು ಇತರ ಪ್ರಮುಖ ಪ್ರಕರಣಗಳಲ್ಲಿ ಆರೋಪಿಗಳ ಮೊಬೈಲ್ ಸಂಖ್ಯೆಗಳ ಸಿಡಿಆರ್ ವಿವರಗಳನ್ನು ಸಾಮಾನ್ಯವಾಗಿ ಪಡೆಯಲಾಗುತ್ತದೆ. ಆದರೆ, ಈ ಪ್ರಕರಣದಲ್ಲಿ ಆರೋಪಿ ಪೊಲೀಸರು ಮಹಿಳಾ ಪೇದೆಯ ಮೊಬೈಲ್ ಸಂಖ್ಯೆಯನ್ನು ಇತರೆ ಆರೋಪಿಗಳ ಸಂಪರ್ಕ ಸಂಖ್ಯೆಗಳ ಪಟ್ಟಿಗೆ ಸೇರಿಸಿ ಹಿರಿಯ ಅಧಿಕಾರಿಯಿಂದ ಒಪ್ಪಿಗೆ ಪಡೆದಿದ್ದಾರೆ ಎನ್ನಲಾಗಿದೆ.

ಮಹಿಳಾ ಪೇದೆಯೊಬ್ಬರ ಮೊಬೈಲ್ ಫೋನ್ ಕರೆ ವಿವರ ಪಡೆದು ಕಿರುಕುಳ ನೀಡಿದ ಬಗ್ಗೆ ದೂರು ಬಂದಿದೆ. ಈ ನಿಟ್ಟಿನಲ್ಲಿ ತನಿಖೆ ಮುಂದುವರಿಸಿರುವುದಾಗಿ ಆಯುಕ್ತ ಚೇತನ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. 

ಪ್ರಕರಣದ ತನಿಖೆಯನ್ನು ಡಿಸಿಪಿ ಕನಿಕಾ ಸಿಕ್ರಿವಾಲ್ ನಡೆಸುತ್ತಿದ್ದು, ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಆದ್ಯತೆ ಮೇರೆಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಈ ಬೆಳವಣಿಗೆಯು ವ್ಯಕ್ತಿಯ ಗೌಪ್ಯತೆಯ ಉಲ್ಲಂಘನೆಯನ್ನು ಒಳಗೊಂಡಿರುವುದರಿಂದ ಕಳವಳ ಉಂಟುಮಾಡಿದೆ.

SCROLL FOR NEXT