ರಾಜ್ಯ

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಉಕ್ಕಿನ ಬೇಲಿ, ಕಂಬ ಕದಿಯುವ ಗ್ಯಾಂಗ್ ಸಕ್ರಿಯ!

Nagaraja AB

ಮೈಸೂರು: ಮೈಸೂರು-ಬೆಂಗಳೂರು ಪ್ರವೇಶ ನಿಯಂತ್ರಿತ ಹೆದ್ದಾರಿಯಲ್ಲಿ ಉಕ್ಕಿನ ಬೇಲಿಗಳು ಮತ್ತು ವಿದ್ಯುತ್ ಕಂಬಗಳು, ವಿಷನ್ ಬ್ಯಾರಿಯರ್, ಬ್ಲಿಂಕರ್‌ಗಳು ಮತ್ತು ಫಲಕಗಳು ಈಗ ಕೆಲವು ಸ್ಥಳೀಯ ಗ್ಯಾಂಗ್‌ಗಳ ಕೆಂಗಣ್ಣಿಗೆ ಗುರಿಯಾಗಿವೆ.

ಹೆದ್ದಾರಿಯಲ್ಲಿ ಕಾರ್ಯಾಚರಿಸುತ್ತಿರುವ ಗ್ಯಾಂಗ್‌ಗಳು ಗ್ಯಾಸ್ ಕಟರ್‌ಗಳು ಮತ್ತು ಇತರ ಹೈಟೆಕ್ ಉಪಕರಣಗಳನ್ನು ಬಳಸಿ ರಾತ್ರಿಯಲ್ಲಿ ಈ ವಸ್ತುಗಳನ್ನು ಕತ್ತರಿಸಿ ತೆಗೆದುಕೊಂಡು ಹೋಗುತ್ತಿದ್ದಾರೆ. ಹೆದ್ದಾರಿಯಲ್ಲಿ ಈ ರೀತಿಯ ಕಳ್ಳತನ ತಿಂಗಳುಗಳಿಂದ ನಡೆಯುತ್ತಿದ್ದರೂ, ಅದನ್ನು ತಡೆಯಲು ಪೊಲೀಸರು ಸ್ವಲ್ಪಮಟ್ಟಿಗೆ ನಿರ್ಲಕ್ಷ್ಯ ವಹಿಸಿದ್ದಾರೆ. 

ಆರಂಭದಲ್ಲಿ, ಗ್ರಾಮಸ್ಥರು ಹೆದ್ದಾರಿ ದಾಟಿ ತಮ್ಮ ಹೊಲಗಳಿಗೆ ಹೋಗಲು ಉಕ್ಕಿನ ಬೇಲಿಯನ್ನು ತೆಗೆಯುತ್ತಿದ್ದಾರೆ ಎಂದು ನಂಬಲಾಗಿತ್ತು. ಆದರೆ ಇತ್ತೀಚೆಗೆ ಶ್ರೀರಂಗಪಟ್ಟಣ-ಮಂಡ್ಯ, ಮದ್ದೂರು-ಚನಪಟ್ಟಣ, ರಾಮನಗರ- ಬಿಡದಿ ನಡುವೆ ಹೆದ್ದಾರಿಯಲ್ಲಿ ಈ ರೀತಿಯ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

ಹಲವೆಡೆ ಸೂಚನಾ ಫಲಕಗಳು, ಬ್ಲಿಂಕರ್‌ಗಳು ಮತ್ತು ವಿಷನ್ ಬ್ಯಾರಿಯರ್ ಕಣ್ಮರೆಯಾಗಿರುವುದರಿಂದ ವಾಹನ ಸವಾರರು ರಾತ್ರಿ ವೇಳೆ ಹೆದ್ದಾರಿ ಪ್ರವೇಶಿಸಲು ಮತ್ತು ಹೊರಬರಲು ಕಷ್ಟಪಡುತ್ತಾರೆ. ಇದರಿಂದ ಅನೇಕ ಅಪಘಾತಗಳು ಸಂಭವಿಸಿವೆ ಎಂದು ಮೂಲಗಳು ತಿಳಿಸಿವೆ.

ಕಾಮಗಾರಿ ನಿರ್ವಹಿಸಿದ ಖಾಸಗಿ ಸಂಸ್ಥೆ ಮತ್ತು ಎನ್‌ಎಚ್‌ಎಐ ಹಲವು ದೂರುಗಳನ್ನು ನೀಡಿದ್ದರೂ ಪೊಲೀಸರು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಪೊಲೀಸರ ನಿಷ್ಕ್ರಿಯತೆಯಿಂದಾಗಿ ದರೋಡೆಕೋರರು ಮನಬಂದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಯಾರಾದರೂ 30 ಅಡಿ ಉಕ್ಕಿನ ಕಂಬವನ್ನು ಹೇಗೆ ಕತ್ತರಿಸಬಹುದು? ಇದನ್ನು ಒಬ್ಬ ಅಥವಾ ಇಬ್ಬರು ವ್ಯಕ್ತಿಗಳಿಂದ ಮಾಡಲಾಗುವುದಿಲ್ಲ. ಕೆಲ ಸಂಘಟಿತ ಗ್ಯಾಂಗ್‌ಗಳು ಹೆದ್ದಾರಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ~ ಎಂದು ಮದ್ದೂರಿನ ರವಿ ಹೇಳಿದರು.

ಎನ್‌ಎಚ್‌ಎಐ ಪೊಲೀಸ್‌ ಔಟ್‌ಪೋಸ್ಟ್‌ ಸ್ಥಾಪಿಸಬೇಕು: ಗ್ಯಾಂಗ್ ಗಳು ಉಕ್ಕಿನ ಕಂಬ,  ಮತ್ತು ಬೇಲಿಗಳನ್ನು ತೆಗೆದ ನಂತರ ಅವುಗಳನ್ನು ಹೆದ್ದಾರಿಯ ಕೆಳಗೆ ಕತ್ತಲೆಯಲ್ಲಿ ನಿಲ್ಲಿಸಿದ ಲಾರಿಗಳಿಗೆ ಸಾಗಿಸುತ್ತವೆ. ನಂತರ ಕೆಲವು ಹಳ್ಳಿಗಳ ರಸ್ತೆಗಳ ಮೂಲಕ ತಪ್ಪಿಸಿಕೊಳ್ಳುತ್ತಿವೆ. ಹಳ್ಳಿಗಳ ರಸ್ತೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಮತ್ತು ಬೀದಿದೀಪಗಳು ಇಲ್ಲದಿರುವುದು ದರೋಡೆಕೋರರ ಪಾಲಿಗೆ ವರದಾನವಾಗಿದೆ.

ರಸ್ತೆ ಬದಿ ಹೋಟೆಲ್‌ಗಳು, ಡಾಬಾಗಳು ಮತ್ತು ಮೊಬೈಲ್ ಕ್ಯಾಂಟೀನ್‌ಗಳನ್ನು ನಡೆಸುತ್ತಿರುವ ಜನರು ತಮ್ಮ ಆವರಣಗಳಿಗೆ ಹೋಗಲು ಅನುಕೂಲವಾಗುವಂತೆ ಉಕ್ಕಿನ ಬೇಲಿಯನ್ನು ಸಹ ಕತ್ತರಿಸಿದ್ದಾರೆ. ಗ್ಯಾಂಗ್‌ಗಳು ಹೆದ್ದಾರಿ ಪ್ರವೇಶಿಸಲು ಮತ್ತು ನಿರ್ಗಮಿಸಲು ಈ ಸ್ಥಳಗಳನ್ನು ಬಳಸುತ್ತಿವೆ ಎಂದು ಮೂಲಗಳು ತಿಳಿಸಿವೆ.

ಆದರೆ, ಎನ್‌ಎಚ್‌ಎಐ ಅಧಿಕಾರಿಗಳು ಅಂತಹ ಹೋಟೆಲ್‌ಗಳು ಮತ್ತು ತಿನಿಸುಗಳ ಮಾಲೀಕರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.  ಈ ಮಧ್ಯೆ ಎನ್‌ಎಚ್‌ಎಐ ಅಧಿಕಾರಿಗಳು ತಮ್ಮ ಗ್ರಾಮಗಳ ಬಳಿ ಹೆದ್ದಾರಿ ದಾಟಲು ನಿಬಂಧನೆಗಳನ್ನು ಮಾಡಿಲ್ಲ. ಇದರಿಂದ ರಸ್ತೆ ದಾಟಲು ಉಕ್ಕಿನ ಬೇಲಿಗಳನ್ನು ಕಡಿದು ಹಾಕಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. 

ಹೆದ್ದಾರಿ ಆಸ್ತಿ ಕಳ್ಳತನ ತಡೆಯಲು ಎನ್‌ಎಚ್‌ಎಐ ಅಧಿಕಾರಿಗಳು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಮತ್ತು ಪ್ರತಿ 25 ಕಿಮೀಗೆ ಪೊಲೀಸ್ ಔಟ್‌ಪೋಸ್ಟ್‌ಗಳನ್ನು ಸ್ಥಾಪಿಸಬೇಕು ಎಂದು ಮೈಸೂರಿನ ನಿವಾಸಿ ವಾಸು ಹೇಳಿದರು. ಹೆದ್ದಾರಿಯುದ್ದಕ್ಕೂ ಉಕ್ಕಿನ ಬೇಲಿಗಳನ್ನು ಸರಿಪಡಿಸಲು ಗುತ್ತಿಗೆದಾರರಿಗೆ ತಿಳಿಸಲಾಗಿದೆ ಎಂದು ಎನ್‌ಎಚ್‌ಎಐ ಕಾರ್ಯಪಾಲಕ ಎಂಜಿನಿಯರ್ ರಾಹುಲ್ ತಿಳಿಸಿದ್ದಾರೆ. ಹೆದ್ದಾರಿಯಲ್ಲಿನ ಕಳ್ಳತನ ತಡೆಯಲು ಪೊಲೀಸರು ಮತ್ತು ಸೆಸ್ಕಾಂ ಅಧಿಕಾರಿಗಳನ್ನು ಕೋರಲಾಗಿದೆ.

SCROLL FOR NEXT