ಬೆಂಗಳೂರು: ಅಪಾರ್ಟ್ ಮೆಂಟ್ ಈಜುಕೊಳದಲ್ಲಿ ಬಿದ್ದು 10 ವರ್ಷದ ಬಾಲಕಿ ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ವರ್ತೂರಿನ ಪ್ರೆಸ್ಟೀಜ್ ಅಪಾರ್ಟ್ ಮೆಂಟ್‌ನಲ್ಲಿ ಈ ದುರಂತ ಸಂಭವಿಸಿದೆ. ಮೃತ ದುರ್ದೈವಿಯನ್ನು 10 ವರ್ಷದ ಬಾಲಕಿ ಮಾನ್ಯ ಎಂದು ಗುರುತಿಸಲಾಗಿದೆ.
ಬಾಲಕಿ ಈಜುಕೊಳದಲ್ಲಿ ಬಿದಿದ್ದು ಈ ವೇಳೆ ವಿದ್ಯುತ್ ಶಾಕ್ ಸಂಭವಿಸಿ ಸಾವನಪ್ಪಿದ್ದಾಳೆ ಎನ್ನಲಾಗಿದೆ. ಬಾಲಕಿಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಾನ್ಯ ಸಾವನ್ನಪ್ಪಿದ್ದಾಳೆ. ಈ ಸಂಬಂಧ ಬಾಲಕಿ ಪೋಷಕರು ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಿವಾಸಿಗಳ ಆಕ್ರೋಶ, ಪ್ರತಿಭಟನೆ
ಈ ಹಿಂದೆ ಕೂಡ ಅಪಾರ್ಟ್‌ಮೆಂಟ್ ಆಡಳಿತ ಸಮಿತಿಯಿಂದ ಈ ರೀತಿ ಘಟನೆಗಳು ನಡೆದಿರುವುದಾಗಿ ಆರೋಪಿಸಿರುವ ಅಪಾರ್ಟ್ಮೆಂಟ್ ನಿವಾಸಿಗಳು ಸಮಸ್ಯೆಯನ್ನು ಕೂಡಲೇ ಬಗೆ ಹರಿಸಲು ಆಗ್ರಹಿಸಿದ್ದಾರೆ. ಅಪಾರ್ಟ್‌ಮೆಂಟ್ ಬಿಲ್ಡರ್‌ಗಳು ಕನಿಷ್ಠ ವಿದ್ಯುತ್ ಲೈನ್ ಗಳನ್ನು ಕೂಡಾ ಸರಿ ಹಾಕಿಲ್ಲ. ವಿದ್ಯುತ್ ಪೂರೈಕೆ, ವಿದ್ಯುತ್ ಕಂಬಗಳ ನಿರ್ವಹಣೆ ಯನ್ನು ಅಪಾರ್ಟ್ಮೆಂಟ್ ನ PPMS ವಿಭಾಗ ನೋಡಿಕೊಳ್ಳುತ್ತಿತ್ತು. PPMS ನಿರ್ಲಕ್ಷ್ಯದಿಂದಲೇ ಮಗು ಸಾವಾಗಿದೆ.
ಈ ನಿರ್ಲಕ್ಷ್ಯ ಇದೇ ಮೊದಲಲ್ಲ. ಈ ಹಿಂದೆಯೂ ನಡೆದಿತ್ತು ಎಂದು ಪ್ರತಿಭಟನಾಕಾರರು ಕಿಡಿಕಾರಿದರು. ಮಗು ಮೃತಪಟ್ಟ ಹಿನ್ನೆಲೆ ಅತ್ತಿಬೆಲೆಯಿಂದ ವರ್ತೂರು ಬರುವ ಮುಖ್ಯರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ದಿಢೀರ್ ಪ್ರತಿಭಟನೆಯಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ವೈಟ್ ಫೀಲ್ಡ್ ಡಿಸಿಪಿ ಶಿವಕುಮಾರ್, 'ಅಪಾರ್ಟ್‌ಮೆಂಟ್‌ನ ಈಜುಕೊಳಕ್ಕೆ ಬಿದ್ದು 10 ವರ್ಷದ ಮಾನ್ಯ ಎಂಬ ಬಾಲಕಿ ಸಾವನ್ನಪ್ಪಿದ್ದಾಳೆ. ಆಟವಾಡುತ್ತಿದ್ದಾಗ ನೀರಿಗೆ ಬಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಬಾಲಕಿಯ ತಂದೆ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.