ಬೆಂಗಳೂರು: ಅಧಿಕಾರಿಗಳ ಬಳಿ ನೇರವಾಗಿ ದೂರುಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯವಾಗದ ನಾಗರೀಕರು ಜ.3ರಿಂದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಆಯೋಜಿಸಿರುವ ವಿಶೇಷ ಕಾರ್ಯಕ್ರಮದಲ್ಲಿ ಸಮಸ್ಯೆಗಳ ಅಹವಾಲು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶುಕ್ರವಾರ ಹೇಳಿದರು.
ಬಿಬಿಎಂಪಿ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಬಳಿಕ ಮಾತನಾಡಿದ ಅವರು, ‘ಸುಮಾರು 10 ದಿನ ಈ ಕಾರ್ಯಕ್ರಮ ನಡೆಯಲಿದೆ. ನಾನು, ಸಂಬಂಧಪಟ್ಟ ಶಾಸಕರು, ಬಿಬಿಎಂಪಿ, ಬಿಡಿಎ, ಬೆಸ್ಕಾಂ, ಬಿಎಂಟಿಸಿ, ಕಂದಾಯ ಮತ್ತು ಇತರ ಇಲಾಖೆಗಳು ಅಧಿಕಾರಿಗಳು ಭಾಗಿಯಾಗಲಿದ್ದೇವೆ ಎಂದು ಹೇಳಿದರು.
ಜ.3ರಿಂದ 10 ದಿನಗಳ ಕಾಲ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಕುಂದುಕೊರತೆ ನಿವಾರಣಾ ಕಾರ್ಯಕ್ರಮ ನಡೆಯಲಿದೆ. ಇಲ್ಲಿ ಸಾರ್ವಜನಿಕರು ತಮ್ಮ ಮನವಿ ಮತ್ತು ಅರ್ಜಿಗಳನ್ನು ಸಲ್ಲಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಸಮಸ್ಯೆಗಳ ಪರಿಹರಿಸಿಕೊಳ್ಳಲು ಬರುವ ಜನರು ತಮ್ಮ ಆಧಾರ್ ಕಾರ್ಡ್ ಅಥವಾ ಪ್ಯಾನ್ ವಿವರಗಳನ್ನು ಒದಗಿಸಬೇಕು. ಈ ಕಾರ್ಯಕ್ರಮವು ಜನರ ಮನೆ ಬಾಗಿಲಿಗೆ ಸರ್ಕಾರವನ್ನು ಕೊಂಡೊಯ್ಯುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು.
ಎರಡರಿಂದ ಮೂರು ವಿಧಾನಸಭಾ ಕ್ಷೇತ್ರಗಳನ್ನು ಒಟ್ಟುಗೂಡಿಸಿ 10 ದಿನಗಳ ಕಾಲ ಕುಂದುಕೊರತೆ ನಿವಾರಣಾ ಕಾರ್ಯಕ್ರಮ ನಡೆಯಲಿದೆ. ಜನರು ತಮ್ಮ ಮನವಿಗಳನ್ನು ಅಥವಾ ಅರ್ಜಿಗಳನ್ನು ಸಲ್ಲಿಸಲು ಸಾಧ್ಯವಾಗುತ್ತದೆ. ಆದರೆ, ಅವರು ಮೇಲ್ಮನವಿ ಸಲ್ಲಿಸಲು ಆಧಾರ್ ಕಾರ್ಡ್ ಅಥವಾ PAN ಕಾರ್ಡ್ ಅನ್ನು ಕಡ್ಡಾಯಗೊಳಿಸಲಾಗಿದೆ.
ಪ್ರತಿನಿತ್ಯ ನೂರಾರು ಜನರು ತಮ್ಮ ಮನವಿಯೊಂದಿಗೆ ನಮ್ಮ ಬಳಿಗೆ ಬರುತ್ತಾರೆ.ಜನರು ಸರಕಾರದ ಮನೆ ಬಾಗಿಲಿಗೆ ಬರುವುದಕ್ಕಿಂತ ಸರಕಾರವನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯುವ ಉದ್ದೇಶದಿಂದ ಈ ಕುಂದುಕೊರತೆ ನಿವಾರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಕನಕಪುರದಲ್ಲಿ ಇಂತಹ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ರಾಮನಗರದಲ್ಲಿಯೂ ಇತ್ತೀಚೆಗೆ ನಡೆಸಲಾಯಿತು.
ಬೆಂಗಳೂರಿನಲ್ಲಿ ತೆರಿಗೆ ಕಟ್ಟದಿದ್ದರೆ ಬಿಡುವುದಿಲ್ಲ. ಎಲ್ಲಾ ಕಡೆ ಬೀಗ ಹಾಕುತ್ತೇವೆ. ತೆರಿಗೆಯಿಂದಲೇ ಹಣ ಸಂಗ್ರಹ ಆಗುವುದು. ಅಭಿವೃದ್ಧಿಗೆ ತೆರಿಗೆ ಮೂಲ, ಯಾವುದೇ ತೆರಿಗೆ ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.