ರಾಜ್ಯ

ಹೊಸ ವರ್ಷಾಚರಣೆ: ಸುರಕ್ಷತಾ ಕ್ರಮಗಳ ಅನುಸರಿಸುವಂತೆ ಜನತೆಗೆ ಬೆಸ್ಕಾಂ ಮನವಿ

Manjula VN

ಬೆಂಗಳೂರು: ಹೊಸ ವರ್ಷಾಚರಣೆಗೆ ಸಿಲಿಕಾನ್ ಸಿಟಿ ಸಜ್ಜಾಗುತ್ತಿದ್ದು, ಈ ನಡುವಲ್ಲೇ ಸಂಭ್ರಮಾಚರಣೆ ಸಂದರ್ಭದಲ್ಲಿ ಸಂಭವಿಸುವ ಅವಘಡಗಳ ತಡೆಯಲು ಸುರಕ್ಷತಾ ಕ್ರಮಗಳಿಗೆ ಆದ್ಯತೆ ನೀಡುವಂತೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಸಾರ್ವಜನಿಕರಿಗೆ ಮನವಿ ಮಾಡಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಸಹ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಹೆಚ್ಚಾಗಿ ಜನ ಸೇರುವ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ​, ಕೋರಮಂಗಲ, ವೈಟ್‌ಫೀಲ್ಡ್ ಸೇರಿದಂತೆ ನಗರದ ಹಲವೆಡೆ ಪಬ್, ಕ್ಲಬ್‌ಗಳು, ಹೋಟೆಲ್​ಗಳು, ರೆಸ್ಟೊರೆಂಟ್​ಗಳಲ್ಲಿ ಪಾರ್ಟಿಗಳಿಗೆ ಸಿದ್ಧತಾ ಕಾರ್ಯಗಳು ನಡೆಯುತ್ತಿವೆ. ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದೆ. ಇಂಥ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಲವು ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗುತ್ತಿದ್ದು, ಸಾರ್ವಜನಿಕರಿಗೆ ವಿದ್ಯುತ್ ಸುರಕ್ಷತೆಯ ನಿಯಮಾವಳಿಗಳನ್ನು ಪಾಲಿಸಲು ವಿನಂತಿಸಿದೆ.

ವಿದ್ಯುತ್ ಕಂಬಗಳ ಮೇಲೆ ಬ್ಯಾನರ್ ಅಥವಾ ಬಂಟಿಂಗ್​ಗಳನ್ನು ಕಟ್ಟಬಾರದು, ಬೆಸ್ಕಾಂನ ಯಾವುದೇ ಮೂಲಸೌಕರ್ಯಗಳಿಗೆ ಹಾನಿ ಮಾಡಬಾರದು, ವಿದ್ಯುತ್‌ ಕಂಬಗಳಿರುವ ಪಾದಚಾರಿ ಮಾರ್ಗಗಳಲ್ಲಿ ವಾಹನಗಳನ್ನು ಚಲಾಯಿಸಬಾರದು, ವಿದ್ಯುತ್‌ ಕಂಬಗಳು ಹಾಗೂ ಟ್ರಾನ್ಸ್‌ ಫಾರ್ಮರ್‌ಗಳಿರುವ ಸ್ಥಳಗಳಲ್ಲಿ ಕಸ-ಕಡ್ಡಿಗಳನ್ನು ಎಸೆಯಬಾರದು, ವಿದ್ಯುತ್‌ ಮೂಲಸೌಕರ್ಯಗಳ ಬಳಿ ಸಿಡಿಮದ್ದುಗಳನ್ನು ಸುಡಬಾರದು ಎಂದು ಹೇಳಿದೆ.

ವಿದ್ಯುತ್ ಸ್ವಿಚ್​ಗಳು, ಅಲಂಕಾರಿಕಾ ವಿದ್ಯುತ್ ಬಲ್ಬ್​ಗಳು ಮತ್ತು ಲೈಟ್​ಗಳು ದುರಸ್ತಿಯಾದ ಸಂದರ್ಭದಲ್ಲಿ ಸಾರ್ವಜನಿಕರೇ ಖುದ್ದಾಗಿ ಅವುಗಳನ್ನು ದುರಸ್ತಿ ಮಾಡಲು ಪ್ರಯತ್ನಿಸದೇ, ಪರಿಣಿತ ಎಲೆಕ್ಟ್ರಿಷಿಯನ್​ಗಳ ಸಹಾಯ ಪಡೆಯಬೇಕು. ಯಾವುದೇ ಹೆಚ್.ಟಿ ಅಥವಾ ಎಲ್.ಟಿ ವಿದ್ಯುತ್ ಜಾಲಗಳ ಅಡಿಯಲ್ಲಿ ಹೊಸವರ್ಷದ ಪೆಂಡಲ್​ಗಳನ್ನು ನಿರ್ಮಿಸ ಕೂಡದು. ಯಾವುದಾದರೂ ವಿದ್ಯುತ್ ಮಾರ್ಗವು ತುಂಡಾಗಿದ್ದರೆ ಅಥವಾ ಹಾನಿಗೀಡಾಗಿದ್ದರೆ ತಕ್ಷಣ ಬೆಸ್ಕಾಂ ಸಹಾಯವಾಣಿ 1912ಕ್ಕೆ ಕರೆಮಾಡಿ ತಿಳಿಸಬೇಕು ಎಂದು ಪ್ರಕಟಣೆಯಲ್ಲಿ ಹೇಳಿದೆ.

SCROLL FOR NEXT