ಬೆಂಗಳೂರು: ಸಂವಿಧಾನದ ಧ್ಯೇಯೋದ್ದೇಶಗಳನ್ನು ಅನುಷ್ಠಾನಕ್ಕೆ ತರುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ಸಮಾಜದ ದುರ್ಬಲ ವರ್ಗದವರಿಗೆ ಆರ್ಥಿಕ ಮತ್ತು ಸಾಮಾಜಿಕ ಶಕ್ತಿ ನೀಡುವತ್ತ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಹೇಳಿದರು.
ಬೆಂಗಳೂರಿನಲ್ಲಿ ಶನಿವಾರ ನಡೆದ ನಿಡುಮಾಮಿಡಿ ಶ್ರೀ ಪಿತಾರೋಹಣ-33 ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದಲ್ಲಿರುವ ಜಾತೀಯತೆ, ಸಾಮಾಜಿಕ ಅಸಮಾನತೆ ತೊಲಗಬೇಕು ಎಂದು ಹೇಳಿದರು.
ಆರ್ಥಿಕ, ಸಾಮಾಜಿಕ ಅಸಮಾನತೆ ನಿವಾರಣೆಯಾಗದಿದ್ದರೆ ದೇಶಕ್ಕೆ ಸ್ವಾತಂತ್ರ್ಯ ಬಂದರೂ ಪ್ರಯೋಜನವಿಲ್ಲ. ಹಿಂದುಳಿದ ವರ್ಗದ ಜನರು ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ಪಡೆದಾಗ ಮಾತ್ರ ಸ್ವಾತಂತ್ರ್ಯ ಪಡೆದಿದ್ದಕ್ಕೂ ಸಾರ್ಥಕವಾಗುತ್ತದೆ. ಆದ್ದರಿಂದ ಇದನ್ನು ಗಮನದಲ್ಲಿಟ್ಟುಕೊಂಡು ಸಮಾನತೆಗಾಗಿ ಶ್ರಮಿಸುವ ಜವಾಬ್ದಾರಿ ಎಲ್ಲರ ಮೇಲಿದೆ.
ಮನುಷ್ಯತ್ವ ಅಂತಿಮ ಗುರಿಯಾಗಬೇಕು. ಅಲ್ಪಮಾನವರಾಗದೇ, ವಿಶ್ವಮಾನವರಾಗುವತ್ತ ನಮ್ಮೆಲ್ಲರ ಪ್ರಯತ್ನವಿರಬೇಕು. ಸಾಮಾಜಿಕ ಹಾಗೂ ಆರ್ಥಿಕ ಚಟುವಟಿಕೆಗಳ ಮೂಲಕ ಸಮಾಜದಲ್ಲಿ ಚಲನೆ ಉಂಟಾಗುತ್ತದೆ. ಸಮಾಜದಲ್ಲಿ ಬದಲಾವಣೆ ಆಗುವವರೆಗೂ ಹೋರಾಟ ನಡೆಸುವ ಗುರಿಯಿಂದಲೇ ’ಹೋರಾಟಕ್ಕೆ ಸಾವಿಲ್ಲ’ ಎಂಬ ಕೃತಿಯನ್ನು ಹೊರತರಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟವನ್ನು ಹತ್ತಿಕ್ಕಬಾರದು. ಆದರೆ ಹೋರಾಟಗಳು ಅಹಿಂಸಾತ್ಮಕವಾಗಿರಬೇಕು ಎಂದು ತಿಳಿಸಿದರು.
ನಿಡುಮಾಮಿಡಿ ಮಠದ ಕುರಿತು ಮಾತನಾಡಿ, ಚಿಕ್ಕಬಳ್ಳಾಪುರ ಶ್ರೀ ನಿಡುಮಾಮಿಡಿ ಮಠದ ವತಿಯಿಂದ ಧಾರ್ಮಿಕ ಚಟುವಟಿಕೆಗಳು, ಶಿಕ್ಷಣ ಸಂಸ್ಥೆಗಳು ನಡೆಯುತ್ತವೆ. ಶ್ರೀ ಮಠವು ಯಾವುದೇ ಜಾತಿ, ಧರ್ಮ, ಸಂಸ್ಕೃತಿಗಳಿಗೆ ಮೀಸಲಾಗದ ಜಾತ್ಯಾತೀತವಾದ ಮಾನವ ಧರ್ಮ ಪೀಠ ಎನಿಸಿದೆ. ಸ್ವಾಮೀಜಿಗಳು ನಿರ್ಭಿತಿಯಿಂದ ನಿಷ್ಕಲ್ಮಶವಾಗಿ ಜಾತ್ಯಾತೀತ ಮಾನವೀಯ ಸಮಾಜ ಸ್ಥಾಪನೆಯಾಗಬೇಕೆಂಬ ಆಶಯವನ್ನು ಹೊಂದಿದ್ದು, ತಮ್ಮ ಜೀವನದುದ್ದಕ್ಜೂ ಆ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಮಾನವ ಧರ್ಮ ಸ್ಥಾಪಿಸುವ ಶ್ರೀಮಠದ ಗುರಿ ಈಡೇರಿಕೆಗೆ ಸರ್ಕಾರ ಎಲ್ಲ ರೀತಿಯ ಸಹಕಾರವನ್ನು ನೀಡಲಿದೆ ಎಂದರು.