ರಾಜ್ಯ

'ನನ್ನ ಅರೆಸ್ಟ್ ಹಿಂದೆ ವ್ಯವಸ್ಥಿತ ಪಿತೂರಿ ಇದೆ, ಟೈಮ್ ಬಂದಾಗ ಎಲ್ಲವನ್ನೂ ಹೇಳ್ತೇನೆ': ಪ್ರತಾಪ್ ಸಿಂಹ ಸೋದರ ವಿಕ್ರಮ್ ಸಿಂಹ

Sumana Upadhyaya

ಹಾಸನ: ನನ್ನ ಬಂಧನ ಬಗ್ಗೆ ಮುಂದಿನ ದಿನಗಳಲ್ಲಿ ಎಲ್ಲ ಹೇಳುತ್ತೇನೆ, ನನ್ನನ್ನು ಅನವಶ್ಯಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಸೋದರ ವಿಕ್ರಮ್ ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ.

ಹಾಸನ ಪೊಲೀಸ್ ಠಾಣೆಯಲ್ಲಿ ಇಂದು ಹೆಚ್ಚಿನ ವಿಚಾರಣೆಗೆಂದು ಅರಣ್ಯ ಇಲಾಖೆ ಅಧಿಕಾರಿಗಳು ಕರೆತರುತ್ತಿದ್ದ ವೇಳೆ ಮಾಧ್ಯಮ ಪ್ರತಿನಿಧಿಗಳ ಮುಂದೆ ಆಕ್ರೋಶಭರಿತರಾಗಿ ಮಾತನಾಡಿದ ಅವರು, ನನ್ನ ಅರೆಸ್ಟ್ ಹಿಂದೆ ವ್ಯವಸ್ಥಿತ ಪಿತೂರಿ.. ಟೈಮ್ ಬಂದಾಗ ಎಲ್ಲವನ್ನೂ ಹೇಳ್ತೇನೆ ಎಂದರು.

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ನಂದಗೊಂಡನಹಳ್ಳಿಯಲ್ಲಿ ಮರಗಳ ಮಾರಣಹೋಮ ಆರೋಪದಲ್ಲಿ ವಿಕ್ರಮ್ ಸಿಂಹ ಅವರ ಬಂಧನವಾಗಿದೆ. ರಾಜಕೀಯಕ್ಕೆ ಬರಲು ನನ್ನ ವಿರುದ್ಧ ಪಿತೂರಿ ಮಾಡುತ್ತಿರುವವರ ಬಗ್ಗೆ ಬಹಿರಂಗವಾಗಿಯೇ ಹೇಳುತ್ತೇನೆ. ನಿಷ್ಠಾವಂತ ಅಧಿಕಾರಿ ಎಂದು ಹೇಳ್ತಾ ಇದ್ದೀರಿ, ಅವರ ನಿಷ್ಠೆ ಯಾರಿಗೆ ಅನ್ನೋದನ್ನು ಹೇಳ್ತೀನಿ ಎಂದು ಹೇಳಿದರು.

ನನ್ನನ್ನು ವ್ಯವಸ್ಥಿತವಾಗಿ ಮುಗಿಸೋಕೆ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಉತ್ತರ ಕೊಡುತ್ತೇನೆ. ಅಣ್ಣನನ್ನು ಟಾರ್ಗೆಟ್ ಮಾಡ್ತಿದ್ದಾರೆ ಎಂದು ಆರೋಪಿಸಿದರು. 

ಹೈಬಿಪಿಯಿಂದ ಬಳಲಿದ ವಿಕ್ರಮ್ ಸಿಂಹ:  ಅರಣ್ಯ ಇಲಾಖೆ ಬಂಧನದಲ್ಲಿರುವ ವಿಕ್ರಮ್ ಸಿಂಹಗೆ ಹೈ ಬಿಪಿ ಕಾಣಿಸಿಕೊಂಡಿದ್ದು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಹಾಸನದ ವೈದ್ಯಕೀಯ ಬೋಧಕ ಆಸ್ಪತ್ರೆಯ ತುರ್ತು ಚಿಕಿತ್ಸಾ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಂದು ಗಂಟೆ ರೆಸ್ಟ್ ಮಾಡಲು ವೈದ್ಯರು ಸೂಚಿಸಿದರು. ನಂತರ ಪರಿಶೀಲನೆ ನಡೆಸಿ ಕಳುಹಿಸಿದರು. 

ಕೋಟ್ಯಂತರ ರೂಪಾಯಿ ಮೌಲ್ಯದ ಮರ ಕಡಿದ ಆರೋಪದ ಮೇಲೆ ಸಂಸದ ಪ್ರತಾಪ್ ಸಹೋದರ ವಿಕ್ರಂ ಸಿಂಹ ಅವರನ್ನು ಅರಣ್ಯಾಧಿಕಾರಿಗಳು ನಿನ್ನೆ ಬಂಧಿಸಿದ್ದರು. ಕೋಟ್ಯಾಂತರ ರೂಪಾಯಿ ಮೌಲ್ಯದ 126 ಮರಗಳನ್ನು ಕಡಿದು ಸಾಗಿಸಿದ ಆರೋಪ ವಿಕ್ರಮ್ ಸಿಂಹ ಅವರ ಮೇಲಿದೆ. ಹೀಗಾಗಿ ವಿಕ್ರಮ್ ಸಿಂಹ ವಿರುದ್ಧ ಕೇಸ್ ದಾಖಲಾಗಿದೆ. ಬೆಂಗಳೂರಿನ ಮಲ್ಲೇಶ್ವರಂನ ಅರಣ್ಯ ಭವನದಲ್ಲಿ ವಿಕ್ರಮ ವಿಚಾರಣೆ ಮಾಡಲಾಗುತ್ತಿದೆ.

SCROLL FOR NEXT