ರಾಜ್ಯ

ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ಭವಿಷ್ಯ ಮತ್ತು ಬೆಳವಣಿಗೆ ಆಧಾರಿತವಾಗಿದೆ: ಬಿಜೆಪಿ

Manjula VN

ಬೆಂಗಳೂರು: ಆಡಳಿತಾರೂಢ ಬಿಜೆಪಿ ನಾಯಕರು ಪ್ರಸಕ್ತ ಸಾಲಿನ ಕೇಂದ್ರದ ಬಜೆಟ್'ನ್ನು ಭವಿಷ್ಯದ ಮತ್ತು ಬೆಳವಣಿಗೆ ಆಧಾರಿತವಾಗಿದೆ ಎಂದು ಬಣ್ಣಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ಇದು 'ಅಮೃತ್ ಕಾಲ' ಬಜೆಟ್ ಎಂದು ಕರೆದಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭವಿಷ್ಯ ಬಜೆಟ್ ಆಗಿದ್ದು, 5 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಭಾರತದ ಬೆಳವಣಿಗೆಯನ್ನು ಹೆಚ್ಚಿಸಲು ಸ್ಪಷ್ಟ ಮಾರ್ಗಸೂಚಿಯನ್ನು ಇದು ಒದಗಿಸುತ್ತದೆ ಎಂದು ಹೇಳಿದ್ದಾರೆ.

"ಬಜೆಟ್ ಮಧ್ಯಮ ವರ್ಗದವರ ಕೊಡುಗೆಯನ್ನು ಗುರುತಿಸುತ್ತದೆ ಮತ್ತು ಅವರ ಕಾಳಜಿಗಳನ್ನು ಪರಿಹರಿಸುತ್ತದೆ. ಎಲ್ಲರಿಗೂ ಯಾವುದಾದರೂ ಕೊಡುಗೆಯನ್ನು ನೀಡುತ್ತದೆ ಎಂದು ತಿಳಿಸಿದ ಅವರು, ಭದ್ರಾ ಮೇಲ್ದಂಡೆ ಯೋಜನೆಗೆ ರೂ.5,300 ಕೋಟಿ ನೆರವು ಘೋಷಿಸಿದ್ದಕ್ಕೆ ಪ್ರಧಾನಿ ಮೋದಿಯವರಿಗೆ ಧನ್ಯವಾದಗಳನ್ನು ಹೇಳಿದರು.

ಆತ್ಮನಿರ್ಭರ ಭಾರತ ದೃಷ್ಟಿಗೆ ಉತ್ತೇಜನ ನೀಡುವ ಈ ಬಜೆಟ್, ಸಮಾಜದ ಪ್ರತಿಯೊಂದು ವರ್ಗಕ್ಕೂ ಪ್ರಯೋಜನವನ್ನು ನೀಡುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಅವರು ಹೇಳಿದ್ದಾರೆ.

ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ನೀಡಿರುವ 5,300 ಕೋಟಿ ರೂ.ಗಳ ನೆರವಿನಿಂದ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಮತ್ತು ದಾವಣಗೆರೆ ಜಿಲ್ಲೆಗಳ ರೈತರಿಗೆ ನೀರಾವರಿ ಸೌಲಭ್ಯಗಳನ್ನು ಒದಗಿಸಿದಂತಾಗುತ್ತದೆ. ಈ ಮೂಲಕ ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರು ಒದಗಿಸಿದಂತಾಗುತ್ತದೆ ಎಂದು ತಿಳಿಸಿದ್ದಾರೆ.

ಸಿರಿಧಾನ್ಯವನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ನೀಡಿರುವ ವಿಶೇಷ ಗಮನವು ನಾಗರಿಕರಲ್ಲಿ ಉತ್ತಮ ಪೋಷಣೆ ಮತ್ತು ಆರೋಗ್ಯವನ್ನು ಖಚಿತಪಡಿಸುತ್ತದೆ ಮತ್ತು ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟವನ್ನು ಹೆಚ್ಚಿಸುತ್ತದೆ ಎಂದರು.

ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸುವ ಮೂಲಕ ಮಧ್ಯಮ ವರ್ಗದ ಕಳವಳಗಳನ್ನು ಬಜೆಟ್‌ನಲ್ಲಿ ತಿಳಿಸಲಾಗಿದೆ ಎಂದು ಹೇಳಿದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ಪ್ರಧಾನಿ ಮೋದಿ ಅವರು ರೂಪಿಸಿರುವ 'ಸಬ್ಕಾ ಸಾಥ್ ಸಬ್ಕಾ ವಿಕಾಸ್' ದೃಷ್ಟಿಕೋನವನ್ನು ಬಜೆಟ್ ನಿಜವಾಗಿಯೂ ಅಳವಡಿಸಿಕೊಂಡಿದೆ ಎಂದು ಹೇಳಿದ್ದಾರೆ.

ಬಜೆಟ್‌ನಿಂದ ಸಮಾಜದ ಪ್ರತಿಯೊಂದು ವರ್ಗಕ್ಕೂ ಅನುಕೂಲವಾಗಲಿದ್ದು, ಎಸ್‌ಸಿ, ಎಸ್‌ಟಿ ಮತ್ತು ಹಿಂದುಳಿದ ವರ್ಗಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಎಂಎಲ್‌ಸಿ ಎನ್.ರವಿಕುಮಾರ್ ಹೇಳಿದ್ದಾರೆ.

SCROLL FOR NEXT