ರಾಜ್ಯ

ಒತ್ತುವರಿ ಭೂಮಿಯನ್ನು ಗುತ್ತಿಗೆ ನೀಡಲಾಗುತ್ತಿದೆ: ಕಂದಾಯ ಸಚಿವ ಆರ್.ಅಶೋಕ್

Manjula VN

ಚಿಕ್ಕಮಗಳೂರು: ಜಿಲ್ಲೆಯಲ್ಲಿ 40 ಸಾವಿರ ಎಕರೆ ಒತ್ತುವರಿ ಭೂಮಿಯನ್ನು ಗುತ್ತಿಗೆಗೆ ನೀಡಲಾಗುತ್ತಿದ್ದು, ಈ ಸಂಬಂಧ ಸುತ್ತೋಲೆ ಪ್ರಕಟಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಅವರು ಭಾನುವಾರ ಹೇಳಿದರು.

ಇಲ್ಲಿನ ಎಐಟಿ ಕಾಲೇಜು ಅಂಫಿ ಥಿಯೇಟರ್‌ನಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟ, ಕರ್ನಾಟಕ ಪ್ಲಾಂಟರ್ಸ್‌ ಅಸೋಸಿಯೇಷನ್‌ ಹಾಗೂ ಯುಪಿಎಎಸ್‌ಇ ವತಿಯಿಂದ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಗುತ್ತಿಗೆ ಪಡೆದಿರುವ ಒತ್ತುವರಿ ಜಮೀನುಗಳಿಗೆ ಬ್ಯಾಂಕ್‌ಗಳಿಂದ ಸಾಲ ನೀಡುವುದನ್ನು ಕಾನೂನಿನ ಚೌಕಟ್ಟಿನಡಿಯಲ್ಲಿ ತರಲಾಗುತ್ತಿದೆ ಎಂದು ಹೇಳಿದರು.

280 ಕೋಟಿ ವೆಚ್ಚದಲ್ಲಿ ಡ್ರೋನ್ ಸರ್ವೆ ಮೂಲಕ ಗುರುತಿಸಿರುವ ಅರಣ್ಯ ಮತ್ತು ಕಂದಾಯ ಜಮೀನುಗಳ ಗಡಿ ಗುರುತಿಸಲು ಟೆಂಡರ್ ಆಹ್ವಾನಿಸಲಾಗಿದೆ. ಪ್ರಾಯೋಗಿಕವಾಗಿ ನಾಲ್ಕೈದು ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 10 ಎಕರೆವರೆಗೆ 2,688 ಬೆಳೆಗಾರರು, 10ರಿಂದ 15 ಎಕರೆವರೆಗೆ 554 ಮಂದಿ, 15ರಿಂದ 20 ಎಕರೆವರೆಗೆ 861 ಮಂದಿ ಹಾಗೂ 989 ರೈತರು 20ರಿಂದ 25 ಎಕರೆವರೆಗೆ ಒತ್ತುವರಿ ಮಾಡಿಕೊಂಡಿದ್ದಾರೆ. ಆತ್ಮಸಾಕ್ಷಿಗೆ ಅನುಗುಣವಾಗಿ ಒತ್ತುವರಿ ಭೂಮಿಯನ್ನು ಗುತ್ತಿಗೆ ನೀಡಲು ಕಾನೂನು ರೂಪಿಸಲಾಗಿದೆ ಎಂದು ತಿಳಿಸಿದರು.

ಡೀಮ್ಡ್ ಅರಣ್ಯದ ವಿಸ್ತಾರ 9 ಲಕ್ಷ ಹೆಕ್ಟೇರ್ ಆಗಿದ್ದು, ಅರಣ್ಯ ಸಚಿವರನ್ನು ಭೇಟಿ ಮಾಡಿ 6 ಲಕ್ಷ ಹೆಕ್ಟೇರ್ ಭೂಮಿಯನ್ನು ಕಂದಾಯ ಇಲಾಖೆ ಹಿಂಪಡೆದುಕೊಂಡಿದೆ. ಆಯಾ ಜಮೀನುಗಳ ಸರ್ವೆ ನಂಬರ್‌ಗಳ ವಿವರಗಳನ್ನು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿದೆ. ಸದರಿ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿರುವ ಮಾಲೀಕರಿಗೆ ಭೂಮಿಯನ್ನು ಹಸ್ತಾಂತರಿಸಲಾಗುವುದು ಎಂದರು.

SCROLL FOR NEXT