ರಾಜ್ಯ

ಕರ್ನಾಟಕದ ರಾಗಿ ಮುದ್ದೆ, ರಾಗಿ ರೊಟ್ಟಿ, ಸಿರಿಧಾನ್ಯ ಸಂಸ್ಕೃತಿ ಕೊಂಡಾಡಿದ ಪ್ರಧಾನಿ ಮೋದಿ

Manjula VN

ಬೆಂಗಳೂರು: ಕರ್ನಾಟಕದ ರಾಗಿ ಮುದ್ದೆ, ರಾಗಿ ರೊಟ್ಟಿ, ಸಿರಿಧಾನ್ಯ ಸಂಸ್ಕೃತಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೊಂಡಾಡಿದ್ದು, ಕರ್ನಾಟಕದ ರಾಗಿ ಮುದ್ದೆ ಮತ್ತು ರಾಗಿ ರೊಟ್ಟಿಯ ಸ್ವಾದವನ್ನು ಮರೆಯಲು ಸಾಧ್ಯವಿಲ್ಲ ಎಂದು ಸೋಮವಾರ ಹೇಳಿದರು.

ತುಮಕೂರು ಗುಬ್ಬಿಯಲ್ಲಿ ಲಘು ಉಪಯೋಗಿ ಹೆಲಿಕಾಪ್ಟರ್‌ ಘಟಕ ಉದ್ಘಾಟನೆ, ಜಲಜೀವನ್‌ ಮಿಷನ್‌ ಯೋಜನೆಗಳ ಅಡಿಗಲ್ಲು ಹಾಗೂ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ ಕೈಗಾರಿಕಾ ಕಾರಿಡಾರ್‌ನಲ್ಲಿ ತುಮಕೂರು ಕೈಗಾರಿಕಾ ಟೌನ್‌ಷಿಪ್‌ ಅಡಿಗಲ್ಲು ಕಾರ್ಯಕ್ರಮದಲ್ಲಿ ಮೋದಿಯವರು ಮಾತನಾಡಿದರು.

ಸಿರಿಧಾನ್ಯದ ಕುರಿತು ಕರ್ನಾಟಕ ಮೊದಲಿನಿಂದಲೂ ತಿಳಿದಿದೆ. ಹಾಗಾಗಿ, ಕರ್ನಾಟಕದ ಇದೇ ಪರಂಪರೆಯನ್ನು ಇಡೀ ದೇಶದಲ್ಲಿ ಶ್ರೀ ಅನ್ನ ಎಂಬ ಹೆಸರಿನಿಂದ ಮುಂದುವರಿಸಲಾಗಿದೆ. ಕರ್ನಾಟಕದಲ್ಲಿ ಶ್ರೀ ಅನ್ನ ರಾಗಿ, ಶ್ರೀ ಅನ್ನ ನವಣೆ, ಶ್ರೀ ಅನ್ನ ಸಾಮೆ, ಶ್ರೀ ಅನ್ನ ಅರ್ಕ, ಶ್ರೀ ಅನ್ನ ಕೊರ್ಲೆ, ಶ್ರೀ ಅನ್ನ ಊದಲು, ಶ್ರೀ ಅನ್ನ ಸಜ್ಜೆ, ಶ್ರೀ ಅನ್ನಬಿಳಿ ಜೋಳದ ರೀತಿ ಅನೇಕ ಶ್ರೀ ಅನ್ನ ಉತ್ಪಾದನೆ ಮಾಡುತ್ತಾರೆ. ಕರ್ನಾಟಕದ ರಾಗಿ ಮುದ್ದೆ, ರಾಗಿ ರೊಟ್ಟಿಯ ಸ್ವಾದವನ್ನು ಯಾರೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು. ಮೋದಿಯವರ ಈ ಹೇಳಿಕೆಗೆ ಕಾರ್ಯಕ್ರಮದಲ್ಲಿದ್ದ ಸಾವಿರಾರು ಜನರು ಹರ್ಷೋದ್ಗಾರ ವ್ಯಕ್ತಪಡಿಸಿದರು.

ಬಳಿಕ ತಮ್ಮ ಭಾಷಣ ಮುಂದುವರೆಸಿದ ಮೋದಿಯವರು, ಶ್ರೀ ಅನ್ನದ ಉತ್ಪಾದನೆಗೂ ಈ ಬಾರಿ ಬಜೆಟ್‌ನಲ್ಲಿ ಬಲ ನೀಡಲಾಗಿದೆ. ಸಣ್ಣ ಸಣ್ಣ ರೈತರಿಗೆ ಇದರಿಂದ ಲಾಭ ಆಗುತ್ತದೆ. ಡಬಲ್‌ ಇಂಜಿನ್‌ ಸರ್ಕಾರದ ಪ್ರಾಮಾಣಿಕ ಪ್ರಯತ್ನದ ಕಾರಣಕ್ಕೆ ಭಾರತದ ನಾಗರಿಕರ ವಿಶ್ವಾಸ ಹೆಚ್ಚಾಗಿದೆ. ಎಲ್ಲ ದೇಶವಾಸಿಗಳ ಜೀವನವನ್ನು ಸುರಕ್ಷಿತವಾಗಿಸಲು ದಿನ ರಾತ್ರಿ ಶ್ರಮಿಸುತ್ತಿದ್ದೇವೆ. ನಿಮ್ಮ ನಿರಂತರ ಆಶೀರ್ವಾದವೇ ನಮಗೆ ಶಕ್ತಿ ಸಿಗುತ್ತದೆ ಎಂದು ತಿಳಿಸಿದರು.

SCROLL FOR NEXT