ರಾಜ್ಯ

119 ಕೋಟಿ ರೂ. ವ್ಯಯಿಸಿದ್ದರೂ ಮುಕ್ತಿ ಕಾಣದ ನಗರದ ರಸ್ತೆ ಗುಂಡಿಗಳು!

Manjula VN

ಬೆಂಗಳೂರು: ನಗರದ ರಸ್ತೆಗಳ ಗುಂಡಿ ಮುಚ್ಚಲು ಈ ವರೆಗೂ ರೂ.119 ಕೋಟಿ ವ್ಯಯಿಸಿದರೂ ಸಮಸ್ಯೆ ಮಾತ್ರ ಇನ್ನೂ ಬಗೆಹರಿದಿಲ್ಲ.

ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ಪಾಲಿಕೆ ವ್ಯಾಪ್ತಿಯ ಎಂಟು ವಲಯಗಳಲ್ಲಿ ರಸ್ತೆ ಗುಂಡಿಗಳನ್ನು ಸರಿಪಡಿಸಲು ಕಳೆದ ಮೂರು ವರ್ಷಗಳಲ್ಲಿ 119.23 ಕೋಟಿ ರೂ. ವ್ಯಯಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕಳೆದ ವರ್ಷ (2021-2022) ರಸ್ತೆ ಗುಂಡಿಗಳನ್ನು ಸರಿಪಡಿಸಲು ಬಿಬಿಎಂಪಿ ಸುಮಾರು 59 ಕೋಟಿ ರೂ ವ್ಯಯಿಸಿದೆ. ಅದೇ ರೀತಿ 2020-2021 ಮತ್ತು 2019-2020ರಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಹೇಳಿದರು.

''ಪ್ರಸಕ್ತ ಹಣಕಾಸು ವರ್ಷದಲ್ಲಿ ಪಾಲಿಕೆಯು ಗುಂಡಿಗಳನ್ನು ಸರಿಪಡಿಸಲು ಸುಮಾರು 36 ಕೋಟಿ ರೂ ವ್ಯಯಿಸಿದ್ದು, ಒಟ್ಟು 35,000 ಕ್ಕೂ ಹೆಚ್ಚು ಗುಂಡಿಗಳನ್ನು ಸರಿಪಡಿಸಿದೆ, ಸುಗಮ ಸಂಚಾರವನ್ನು ಸಕ್ರಿಯಗೊಳಿಸಲು ಹೆಚ್ಚಿನ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ತಿಳಿಸಿದರು.

ರಸ್ತೆ ಗುಂಡಿಗಳ ಸರಿಪಡಿಸಲು ವ್ಯಯಿಸಿದ ಮೊತ್ತಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಅಧಿಕಾರಿಗಳು ಕೆಲ ತಪ್ಪು ಮಾಡಿರುವುದು ನಿಜ. ಈ ಬಗ್ಗೆ ಬಿಬಿಎಂಪಿ ಇಂಜಿನಿಯರ್ ಇನ್ ಚೀಫ್ ಕಚೇರಿಯಲ್ಲಿ ಮಾತ್ರ ನಿಖರವಾದ ಅಂಕಿ ಅಂಶವಿದೆ ಎಂದರು.

ಅಭಿವೃದ್ಧಿ ಕಾಮಗಾರಿಗಳು, ಅದಕ್ಕೆ ತಗುಲಿದ ವೆಚ್ಚದ ಕುರಿತು ಅದಕ್ಕೆ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುವಂತೆ ಇದೇ ವೇಳೆ ಜನತೆ ಬಳಿ ಮನವಿ ಮಾಡಿಕೊಂಡರು.

ಪಾಲಿಕೆಯು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಗುಂಡಿಗಳನ್ನು ಸರಿಪಡಿಸಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ಹೇಳಿಕೆ ನೀಡಿದ್ದರೂ, ಬಿಬಿಎಂಪಿ ವ್ಯಾಪ್ತಿಯಲ್ಲಿ ಹದಗೆಟ್ಟ ರಸ್ತೆಗಳು ಮತ್ತು ಗುಂಡಿಗಳ ಸಮಸ್ಯೆ ಮಾತ್ರ ಇನ್ನೂ ದೂರಾಗಿಲ್ಲ.

ರಸ್ತೆ ಮೂಲಸೌಕರ್ಯ ವಿಭಾಗದ ಬಿಬಿಎಂಪಿ ಅಧಿಕಾರಿಯೊಬ್ಬರು ಮಾತನಾಡಿ, ಮಳೆಯಿಂದಾಗಿ ರಸ್ತೆ ಗುಂಡಿಗಳು ಹೆಚ್ಚಾಗಿವೆ. ಈಗಾಗಲೇ ಹಲವು ರಸ್ತೆಗಳನ್ನು ಸಂಪೂರ್ಣ ಡಾಂಬರೀಕರಣಗೊಳಿಸಲಾಗಿದ್ದು, ವೈಟ್ ಟಾಪಿಂಗ್ ಮಾಡಲಾಗುತ್ತಿದೆ. ಇದರಿಂದ ಗುಂಡಿಗಳು ಮತ್ತು ಹದಗೆಟ್ಟ ರಸ್ತೆಗಳ ಸಮಸ್ಯೆಗಳು ಉದ್ಭವಿಸುವುದಿಲ್ಲ ಎಂದು ಹೇಳಿದ್ದಾರೆ.

SCROLL FOR NEXT