ರಾಜ್ಯ

ನಾನು ಮುಖ್ಯಮಂತ್ರಿಯಾಗಿದ್ದಾಗ ನಡೆದ ಕೋಮು ಘರ್ಷಣೆಯಲ್ಲಿ ಯಾವುದೇ ಹಿಂದೂಗಳ ಹತ್ಯೆಯಾಗಿಲ್ಲ; ಸಿದ್ದರಾಮಯ್ಯ

Manjula VN

ಕಲಬುರಗಿ: ನಾನು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ನಡೆದ ಕೋಮು ಘರ್ಷಣೆಯಲ್ಲಿ ಯಾವುದೇ ಹಿಂದೂಗಳ ಹತ್ಯೆಯಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಕೆಲವು ಹಿಂದೂಗಳು ಮತ್ತು ಅಲ್ಪಸಂಖ್ಯಾತರ ಹತ್ಯೆಯಾಗಿದೆ, ಆದರೆ ಅದು ಬೇರೆ ಬೇರೆ ವಿಷಯಗಳಿಗೆ ನಡೆದಿದ್ದಾಗಿದ್ದು, ಕೋಮು ಘರ್ಷಣೆಯಲ್ಲಿ ಸತ್ತಿದ್ದಲ್ಲ. ಈ ಹತ್ಯೆಗಳಿಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಕಾರಣ ಎಂದು ಆರೋಪಿಸಿದರು.

2017ರ ಡಿಸೆಂಬರ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದ ಪರೇಶ್ ಮೇಸ್ತಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಹಿಂದೂ ಸಂಘಟನೆಗಳು ನನ್ನ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸಿಬಿಐ ತನಿಖೆಗೆ ಆಗ್ರಹಿಸಿದ್ದವು. ನನ್ನ ಸರ್ಕಾರ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ತನಿಖಾ ಸಂಸ್ಥೆ ಅದು ಸಹಜ ಸಾವು ಎಂದು ವರದಿಯನ್ನು ನೀಡಿದೆ ಎಂದು ಹೇಳಿದರು.

ಇದೇ ವೇಳೆ ತಾವು ಹಿಂದೂ ಧರ್ಮಕ್ಕೆ ಸೇರಿದವರೆಂದು ಪುನರುಚ್ಛರಿಸಿದ ಅವರು, ನಾನು ಹಿಂದೂ ಧರ್ಮದ ವಿರುದ್ಧ ಮಾತನಾಡಿಲ್ಲ. ಧರ್ಮವನ್ನು ವಿರೋಧಿಸಿಲ್ಲ. ಯಾವುದೇ ಧರ್ಮ ಹಿಂಸೆಯನ್ನು ಪ್ರಚೋದಿಸುವುದಿಲ್ಲ ಎಂದು ಹೇಳಿದ್ದೆ. ಬಿಜೆಪಿ ಮತ್ತು ಆರೆಸ್ಸೆಸ್ ಕೋಮು ಸೌಹಾರ್ದತೆಗೆ ಧಕ್ಕೆ ತರಲು ಮುಂದಾಗಿದೆ ಎಂದು ತಿಳಿಸಿದರು.

ಬಳಿಕ ಸಂಪುಟ ವಿಸ್ತರಣೆಯಾಗದಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮಗನಿಗೆ ಸ್ಥಾನ ನೀಡುವುದನ್ನು ತಪ್ಪಿಸಲು ಬೊಮ್ಮಾಯಿಯವರು ಸಚಿವ ಸಂಪುಟವನ್ನು ವಿಸ್ತರಿಸದೇ ಇರಬಹುದು ಎಂದರು.

ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸಿ, ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಫೆಬ್ರವರಿ ಕೊನೆಯ ವಾರ ಅಥವಾ ಮಾರ್ಚ್ ಮೊದಲ ವಾರದಲ್ಲಿ ಹೈಕಮಾಂಡ್ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಹೇಳಿದರು.

SCROLL FOR NEXT