ರಾಜ್ಯ

ಏರೋ ಇಂಡಿಯಾ 2023: ಫೆಬ್ರವರಿ 13ಕ್ಕೆ ಸಿಇಒಗಳೊಂದಿಗೆ ರಾಜನಾಥ್ ಸಿಂಗ್ ದುಂಡು ಮೇಜಿನ ಸಭೆ

Manjula VN

ಬೆಂಗಳೂರು: ಏರೋ ಇಂಡಿಯಾ 2023 ರ ಉದ್ಘಾಟನಾ ದಿನವಾದ ಸೋಮವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ರಕ್ಷಣಾ ಸಚಿವಾಲಯವು ‘ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಸಿಇಒ)ಗಳ ದುಂಡು ಮೇಜಿನ ಸಭೆ’ಯನ್ನು ಆಯೋಜಿಸುತ್ತಿದೆ.

ಯಲಹಂಕ ವಾಯುನೆಲೆಯ ಚಂದನ್‍ಸಿಂಗ್ ಏರ್‍ಫೋರ್ಸ್ ಕನ್ವೆಂಷನ್ ಸೆಂಟರ್‍ನಲ್ಲಿ ಈ ಸಭೆ ನಡೆಯಲಿದೆ ಎಂದು ತಿಳಿದುಬಂದಿದೆ.

ಬೋಯಿಂಗ್, ಲಾಕ್ಹೀಡ್, ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್, ಜನರಲ್ ಅಟಾಮಿಕ್ಸ್, ಲೈಬರ್ ಗ್ರೂಪ್, ರೇಥಿಯಾನ್ ಟೆಕ್ನಾಲಜೀಸ್, ಸಫ್ರಾನ್, ಮಿಲಿಟರಿ ಇಂಡಸ್ಟ್ರೀಸ್ ಜನರಲ್ ಅಥಾರಿಟಿ (ಜಿಎಎಂಐ) ನಂತಹ ಜಾಗತಿಕ ಹೂಡಿಕೆದಾರರು ಸೇರಿದಂತೆ 26 ದೇಶಗಳ ಅಧಿಕಾರಿಗಳು, ಪ್ರತಿನಿಧಿಗಳು ಮತ್ತು ಜಾಗತಿಕ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‍ಎಎಲ್), ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್), ಭಾರತ್ ಡೈನಾಮಿಕ್ಸ್ ಲಿಮಿಟೆಡ್ (ಬಿಡಿಎಲ್), ಬಿಇಎಂಎಲ್ ಲಿಮಿಟೆಡ್, ಮಿಶ್ರಾ ಧಾತು ನಿಗಮ ನಿಯಮಿತ ಮತ್ತಿತರ ದೇಶಿಯ ಸಾರ್ವಜನಿಕ ವಲಯದ ಕಂಪೆನಿಗಳು ಮತ್ತು ಭಾರತದ ಪ್ರಮುಖ ಖಾಸಗಿ ರಕ್ಷಣಾ ಮತ್ತು ವೈಮಾನಿಕ ಕಂಪೆನಿಗಳಾದ ಲಾರ್ಸೆನ್ ಮತ್ತು ಟೂಬ್ರೋ, ಭಾರತ್ ಫೋರ್ಜ್, ಡೈನಾಮಿಟಿಕ್ ಟೆಕ್ನಾಲಜೀಸ್, ಬ್ರಹ್ಮೋಸ್ ಏರೋಸ್ಪೇಸ್ ಸೇರಿದಂತೆ ಮತ್ತಿತರ ಸಂಸ್ಥೆಗಳು ಇದರಲ್ಲಿ ಪಾಲ್ಗೊಳ್ಳಲಿವೆ ಎಂದು ತಿಳಿದುಬಂದಿದೆ.

ಭಾರತವು ಜಾಗತಿಕನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಹೂಡಿಕೆಗಳು ಮತ್ತು ವ್ಯಾಪಾರಕ್ಕಾಗಿ ಅಭಿವೃದ್ಧಿ ಹೊಂದುತ್ತಿರುವ ಮತ್ತು ಸ್ಥಿರ ವಾತಾವರಣವನ್ನು ಇಡೀ ವಿಶ್ವಕ್ಕೆ ಒದಗಿಸುತ್ತದೆ. ಭಾರತದ ಮೇಲೆ ಜಗತ್ತಿನ ಗಮನವು ಹೆಚ್ಚಾಗುತ್ತಿರುವುದರಿಂದ ವ್ಯಾಪಾರಕ್ಕೆ ಪೂರಕ ವ್ಯವಸ್ಥೆ ಮತ್ತು ಕಡಿಮೆ ವೆಚ್ಚದಲ್ಲಿ ಪರಿಣಾಮಕಾರಿ ಸ್ಪರ್ಧಾತ್ಮಕತೆಯ ಅನ್ವೇಷಣೆಗೆ ಕಾರಣವಾಗಿದೆ.

ಭಾರತವು ಇಂದು ವಿಶ್ವದ 3ನೇ ಅತಿದೊಡ್ಡ ಮಿಲಿಟರಿಯನ್ನು ಹೊಂದಿದೆ ಮತ್ತು ಮುಂದಿನ 5-7 ವರ್ಷಗಳಲ್ಲಿ ನೌಕಾಪಡೆ (ಫ್ಲೀಟ್) ಆಧುನೀಕರಣಕ್ಕಾಗಿ 130 ಶತಕೋಟಿ ಅಮೆರಿಕನ್ ಡಾಲರ್ ಖರ್ಚು ಮಾಡಲು ಸರಕಾರ ಯೋಜಿಸಿದೆ. ಪರವಾನಗಿಗಳನ್ನು ತೆಗೆದುಹಾಕುವುದು, ನಿಯಂತ್ರಣಗಳನ್ನು ತೆಗೆದುಹಾಕುವುದು, ಆಮದು ಬದಲಿಗಾಗಿ ಧನಾತ್ಮಕ ಸ್ವದೇಶೀಕರಣ ಪಟ್ಟಿಗಳು, ರಫ್ತು ಉತ್ತೇಜನ, ಎಫ್‍ಡಿಐ ಉದಾರೀಕರಣ ಮತ್ತು ರಕ್ಷಣಾ ಕೈಗಾರಿಕಾ ಕಾರಿಡಾರ್‍ಗಳ ಸ್ಥಾಪನೆಯಂತಹ ನೀತಿ ಉಪಕ್ರಮಗಳ ಸರಣಿಯ ಮೂಲಕ ಸರಕಾರವು  ಭಾರತೀಯ ರಕ್ಷಣಾ ಉತ್ಪಾದನಾ ಪೂರಕ ವ್ಯವಸ್ಥೆಯಲ್ಲಿ “ಸ್ವಾವಲಂಬನೆ” ಸಾಧಿಸಲು ನಿರ್ಧರಿಸಿದೆ ಎಂದು ಪ್ರಕಟಣೆ ತಿಳಿಸಿದೆ.

SCROLL FOR NEXT