ರಾಜ್ಯ

ಅಡಿಕೆ ಆಮದು ಗಣನೀಯ ಹೆಚ್ಚಳ: ರೈತರ ಹಿತಾಸಕ್ತಿ ಕಾಪಾಡಿ; ಡಬಲ್ ಎಂಜಿನ್ ಸರ್ಕಾರಕ್ಕೆ ಜೆಡಿಎಸ್ ಒತ್ತಾಯ

Nagaraja AB

ಬೆಂಗಳೂರು: ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ಆಮದು ಮಾಡಿಕೊಳ್ಳಲಾಗಿರುವ ಸಂಗತಿ ವರದಿಯಾಗಿದ್ದು, ಕೇಂದ್ರ ಹಾಗೂ ರಾಜ್ಯ ಬಿಜೆಪಿ  ಸರ್ಕಾರ ನಮ್ಮ ರೈತರ ಹಿತಾಸಕ್ತಿ ಕಾಪಾಡಬೇಕು ಎಂದು ಜೆಡಿಎಸ್ ಒತ್ತಾಯಿಸಿದೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಜೆಡಿಎಸ್, 2022-23ರ ಆರ್ಥಿಕ ವರ್ಷ ನವೆಂಬರ್ ಅಂತ್ಯದವರೆಗೆ‌ 61,450 ಟನ್ ಅಡಿಕೆ ಆಮದಾಗಿದೆ. ಸ್ವತಃ ವಾಣಿಜ್ಯ ಮತ್ತು ಕೈಗಾರಿಕಾ ಖಾತೆಯ ರಾಜ್ಯ ಸಚಿವೆ ಅನುಪ್ರಿಯಾ ಎಸ್ ಪಟೇಲ್ ನೀಡಿರುವ ಲಿಖಿತ ಉತ್ತರದಲ್ಲಿ ಈ ಮಾಹಿತಿ ಹೊರಬಿದ್ದಿದೆ. ಇಡೀ ದೇಶದಲ್ಲಿ ಕರ್ನಾಟಕ ರಾಜ್ಯ ಅತ್ಯುತ್ತಮ ಗುಣಮಟ್ಟದ ಅಡಿಕೆ ಬೆಳೆಗೆ ಹೆಸರುವಾಸಿ ಎಂದು ಹೇಳಿದೆ. 

ಇತ್ತೀಚಿಗೆ ನಡೆದ ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅಡಿಕೆಯನ್ನು ಹೆಚ್ಚು ಬೆಳೆದರೆ ಉಳಿಗಾಲವಿಲ್ಲ ಎಂದು ಹೇಳಿದ್ದರ ಹಿಂದಿನ ಅಸಲಿ ಕಥೆ ಈಗ ಬಹಿರಂಗವಾಗಿದೆ. ನಮ್ಮಲ್ಲಿಯೇ ಉತ್ಕೃಷ್ಟ ಮಟ್ಟದ ಅಡಿಕೆಯನ್ನು ಹೇರಳವಾಗಿ ಬೆಳೆಯುವಾಗ ಅನ್ಯದೇಶಗಳಿಂದ ಆಮದು ಮಾಡಿಕೊಳ್ಳುವುದು ಎಷ್ಟು ಸರಿ? ಎಂದು ಪ್ರಶ್ನಿಸಿದೆ.

ಅಡಿಕೆ ಆಮದು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದ ಸರ್ಕಾರವನ್ನು ಪ್ರಶ್ನಿಸಿದ್ದು, ಈ ಪ್ರಮಾಣದಲ್ಲಿ ಗಣನೀಯವಾಗಿ ಆಮದು ಏರಿಕೆ ಕಂಡಿರುವುದು ಎಚ್ಚರಿಕೆಯ ಗಂಟೆ. ಕೇಂದ್ರ ಹಾಗೂ ರಾಜ್ಯದ ಡಬಲ್ ಎಂಜಿನ್ ಸರ್ಕಾರ ತಡ ಮಾಡದೆ ಕೆಲವು ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳಬೇಕು, ಇದು ನಮ್ಮ ರಾಜ್ಯ- ದೇಶದ ಅಡಿಕೆ ಬೆಳೆಗಾರರ ರಕ್ಷಣೆಗೆ ಅಗತ್ಯ ಎಂದು ಹೇಳಿದೆ.

SCROLL FOR NEXT