ರಾಜ್ಯ

ವಿಧಾನಮಂಡಲ ಅಧಿವೇಶನ: ಮೊದಲ ದಿನವೇ ವಿಪಕ್ಷದ ಹಲವು ನಾಯಕರು ಗೈರು

Manjula VN

ಬೆಂಗಳೂರು: ರಾಜ್ಯ ವಿಧಾನಮಂಡಲ ಅಧಿವೇಶನ ಶುಕ್ರವಾರದಿಂದ ಆರಂಭವಾಗಿದ್ದು, ಮೊದಲ ದಿನವೇ ವಿರೋಧ ಪಕ್ಷಗಳ ಹಲವು ನಾಯಕರು ಗೈರು ಹಾಜರಾಗಿರುವುದು ಕಂಡು ಬಂದಿದೆ.

ವಿಧಾನಮಂಡಲದಲ್ಲಿ ಅಧಿವೇಶನ ನಡೆಯುತ್ತಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಜಂಟಿ ಸದನವನ್ನುದ್ದೇಶಿ ಭಾಷಣ ಮಾಡುತ್ತಿದ್ದಾರೆ.

ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಮುಖಂಡ ಹೆಚ್ ಡಿ ಕುಮಾರಸ್ವಾಮಿಯವರು ಗೈರು ಹಾಜರಾಗಿರುವುದು ಎದ್ದು ಕಾಣುತ್ತಿದೆ.

ಇದರ ಜೊತೆಗೆ ವಿಪಕ್ಷ ಉಪ ನಾಯಕ ಕಾಂಗ್ರೆಸ್ನ ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ಹಾಜರಿರದೆ ಇರುವುದು ಕಂಡು ಬಂದಿದೆ.

ಸಾಮಾನ್ಯವಾಗಿ ಅಧಿವೇಶನಕ್ಕೆ ವಿರೋಧ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ತಪ್ಪದೆ ಭಾಗಿಯಾಗುತ್ತಿದ್ದರು. ಆದರೆ ಪ್ರಜಾಧ್ವನಿ ಯಾತ್ರೆ ಹಿನ್ನೆಲೆಯಲ್ಲಿ ಜಂಟಿ ಅಧಿವೇಶನ ಮೊದಲ ದಿನ ಅವರು ಗೈರಾಗಿದ್ದಾರೆ.

ಸುರಪುರ, ಶಹಾಪುರದಲ್ಲಿ ಇಂದು ಪ್ರಜಾಧ್ವನಿ ಸಮಾವೇಶ ನಿಗದಿಯಾಗಿರುವುದರಿಂದ ಸಿದ್ದರಾಮಯ್ಯ ಅವರು ಜಂಟಿ ಅಧಿವೇಶನದ ಮೊದಲ ದಿನ ಗೈರು ಹಾಜರಾಗಿದ್ದಾರೆಂದು ತಿಳಿದುಬಂದಿದೆ.

ಈ ಮೊದಲು ಆರಂಭದ ಮೂರು ದಿನ ಅಧಿವೇಶನಕ್ಕೆ ಹಾಜರಾಗಲು ಸಿದ್ದರಾಮಯ್ಯ ನಿರ್ಧರಿಸಿದ್ದರು. ಆದರೆ ಇದೀಗ ನಿಗದಿಯಂತೆ ಪ್ರಜಾಧ್ವನಿ ಯಾತ್ರೆಯಲ್ಲಿ ಅವರು ಭಾಗಿಯಾಗಿದ್ದಾರೆಂದು ವರದಿಗಳು ತಿಳಿಸಿವೆ.

ವಿಧಾನಸೌಧ ಸುತ್ತಮುತ್ತ ನಿಷೇಧಾಜ್ಞೆ
ಅಧಿವೇಶನ ಹಿನ್ನೆಲೆಯಲ್ಲಿ ವಿಧಾನಸೌಧದ ಸುತ್ತ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದ್ದು, ವಿಧಾನಸೌಧದಿಂದ 2 ಕಿಮೀ ಸುತ್ತಲಿನ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ 5ಕ್ಕಿಂತ ಹೆಚ್ಚು ಜನರು ಗುಂಪು ಸೇರುವಂತಿಲ್ಲ. ಮೆರವಣಿಗೆ, ಪ್ರತಿಭಟನೆ, ಸಭೆಗಳನ್ನು ಆಯೋಜಿಸುವಂತಿಲ್ಲ. ಯಾವುದೇ ಪ್ರತಿಕೃತಿಗಳ ದಹನ ಮಾಡುವುದಾಗಲೀ, ಪ್ರದರ್ಶನ ಮಾಡುವುದಾಗಲೀ ನಿಷೇಧ ಇದೆ ಎಂದು ಬೆಂಗಳೂರುನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.

SCROLL FOR NEXT