ರಾಜ್ಯ

ಶಿಕ್ಷಕರ ನೇಮಕಾತಿ ಹಗರಣ: ಇನ್ನೂ ಎಂಟು ಶಿಕ್ಷಕರನ್ನು ಬಂಧಿಸಿದ ಸಿಐಡಿ

Ramyashree GN

ಬೆಂಗಳೂರು: ಶಿಕ್ಷಕರ ನೇಮಕಾತಿ ಹಗರಣದಲ್ಲಿ ಅಪರಾಧ ತನಿಖಾ ಇಲಾಖೆ (ಸಿಐಡಿ) ಗುರುವಾರ ವಿವಿಧ ಜಿಲ್ಲೆಗಳ ಎಂಟು ಶಿಕ್ಷಕರನ್ನು ಬಂಧಿಸಿದೆ.

ಬಾಗಲಕೋಟೆಯ ಮದಬಾವಿಯ ಸರ್ಕಾರಿ ಪ್ರೌಢಶಾಲೆಯ (ಜಿಎಚ್‌ಎಸ್) ಶ್ರೀಕಾಂತ್ ನಾಯ್ಕ, ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಕೊಲ್ಹಾರದ ಜಿಎಚ್‌ಎಸ್‌ನ ನಾಯಕ್ ಪ್ರಕಾಶ್ ರತ್ನು, ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕಮರೂರಿನ ಜಿಎಚ್‌ಎಸ್‌ನ ಮಹಬೂಬ್ ಬಾಷಾ ಪಿಆರ್ ಮತ್ತು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಮಳಗಿಯ ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕಿ ಸುಜಾತಾ ಭಂಡಾರಿ ಬಂಧಿತರು. ಈ ಬಂಧಿತ ಶಿಕ್ಷಕರು 2012-13ನೇ ಬ್ಯಾಚ್‌ನಲ್ಲಿ ನೇಮಕಗೊಂಡವರು.

ಅದೇ ರೀತಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊರಟಗೆರೆ ತಾಲೂಕಿನ ಬುಕ್ಕಾಪಟ್ಟಣದ ಜಿಎಚ್‌ಎಸ್‌ನ ದೀಪಾ ರಾಣಿ ಜಿಎನ್, ಪಾವಗಡದ ನಾಗಲಮಡಿಕೆಯ ಜಿಎಚ್‌ಎಸ್‌ನ ಮೋಹನ್ ಕುಮಾರ್ ಜಿಕೆ ಮತ್ತು ಪಾವಗಡದ ವಲ್ಲೂರಿನ ಜಿಎಚ್‌ಎಸ್‌ನ ಮಂಜುನಾಥ್ ಎಸ್ ಬಂಧಿತರು.  ಚಿತ್ರದುರ್ಗದ ಹಿರಿಯೂರು ಪಟ್ಟಣದ ಜಿಎಚ್‌ಎಸ್‌ನಲ್ಲಿ ಶಿಕ್ಷಕ ಶಾಂತಿಲಾಲ್ ಚೌಹಾಣ್ ಎಂಬಾತನನ್ನೂ ಬಂಧಿಸಲಾಗಿದೆ. ಈ ನಾಲ್ವರೂ 2014-15ನೇ ಬ್ಯಾಚ್‌ನಲ್ಲಿ ನೇಮಕಗೊಂಡವರು. ಬಂಧಿತ ಎಂಟು ಶಿಕ್ಷಕರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಿಕ್ಷಕರ ನೇಮಕಾತಿಯಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ 2022ರಲ್ಲಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದವು. ಬಳಿಕ ಪ್ರಕರಣಗಳನ್ನು ಸಿಐಡಿಗೆ ಹಸ್ತಾಂತರಿಸಲಾಗಿತ್ತು. ಸಿಐಡಿ ಈ ಹಿಂದೆ 61 ಶಿಕ್ಷಕರು, ಶಿಕ್ಷಣ ಇಲಾಖೆಯ ಇಬ್ಬರು ನಿರ್ದೇಶಕರು, ಮೂವರು ನಿವೃತ್ತ ಸಹಾಯಕ ನಿರ್ದೇಶಕರು, ಪ್ರಥಮ ದರ್ಜೆ ವಿಭಾಗದ ಸಹಾಯಕ ಮತ್ತು ಕಂಪ್ಯೂಟರ್ ಪ್ರೋಗ್ರಾಮರ್‌ಗಳನ್ನು ಬಂಧಿಸಿತ್ತು.

ಈ ಎರಡೂ ಪ್ರಕರಣಗಳಲ್ಲಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

SCROLL FOR NEXT