ರಾಜ್ಯ

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರು ನಾಮಕರಣ, ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ: ಬಿಎಸ್ ಯಡಿಯೂರಪ್ಪ

Sumana Upadhyaya

ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರು ಇಡುವುದು ಬೇಡ. ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ಇಡಬೇಕು. ಈ ಕುರಿತು ಸದನದಲ್ಲಿ ವಿಷಯ ಮಂಡಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದರು.

20ನೇ ಶತಮಾನ ಕಂಡ ಈ ದೇಶದ ಶ್ರೇಷ್ಠ ಕವಿ. ಜ್ಞಾನಪೀಠ ಪ್ರಶಸ್ತಿ ಪಡೆದವರು. ರಾಜ್ಯದ ಗೀತೆಯನ್ನು ರಚಿಸಿದ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ಇಡಲು ತೀರ್ಮಾನ ಮಾಡಿದ್ದೇವೆ. ಅಧಿವೇಶನದಲ್ಲಿ ಸರ್ವಾನುಮತದಿಂದ ತೀರ್ಮಾನ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳುಹಿಸಲಿದ್ದೇವೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ವಸುದೈವ ಕುಟುಂಬಕಂ ತತ್ವ ಸಾರುವತ್ತ ಕೆಲಸ ಮಾಡುತ್ತಿದ್ದಾರೆ. ಕುವೆಂಪು ಅವರು ವಿಶ್ವಮಾನವ ಸಂದೇಶವನ್ನು ಬರವಣಿಗೆ ಮೂಲಕ ಸಾರಿದ್ದರು. ಅದನ್ನು ಕಾರ್ಯರೂಪಕ್ಕೆ ತರಲು ಪ್ರಧಾನಿ ಮೋದಿ ಅವರು ಶ್ರಮಿಸುತ್ತಿದ್ದಾರೆ. ಕುವೆಂಪು ಅವರ ಹೆಸರನ್ನು ಇಡಬೇಕು ಎಂದು ಅಧಿವೇಶನದಲ್ಲಿ ತಾವೆ ಪ್ರಸ್ತಾಪಿಸುವುದಾಗಿ ಯಡಿಯೂರಪ್ಪ ತಿಳಿಸಿದರು.

ಫೆ.27ರಂದು ನರೇಂದ್ರ ಮೋದಿ ಅವರು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಆಗಮಿಸುವುದು ಖಚಿತವಾಗಿದೆ. ಪ್ರಧಾನಿ ಮೋದಿ ಅವರೆ ಕುವೆಂಪು ಅವರ ಹೆಸರು ಘೋಷಣೆ ಮಾಡಬೇಕು ಎಂಬುದು ತಮ್ಮ ಅಪೇಕ್ಷ ಎಂದರು.

ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 140ಕ್ಕೂ ಹೆಚ್ಚು ಸ್ಥಾನ ಗಳಿಸಿ ಮತ್ತೆ ಅಧಿಕಾರಕ್ಕೆ ತರುತ್ತೇವೆ. ಈ ಚುನಾವಣೆ ಮತ್ತು ಮುಂದಿನ ಚುನಾವಣೆಯಲ್ಲಿ ಸಕ್ರಿಯ ರಾಜಕಾರಣ ಮಾಡುತ್ತೇನೆ. ಯಾವುದೇ ಸ್ಥಾನಮಾನ ಇಲ್ಲದೆ ದುಡಿಯುತ್ತೇನೆ. ಪಕ್ಷವನ್ನು ಅಧಿಕಾರಕ್ಕೆ ತರುವುದು ನನ್ನ ಮುಂದಿರುವ  ಸವಾಲು. ಈ ಸವಾಲನ್ನು ಸಮರ್ಥವಾಗಿ ಎದುರಿಸಿ ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುತ್ತೇನೆ ಎಂದು ಶಪಥ ಮಾಡಿದರು.

ಬಜೆಟ್ ಅಧಿವೇಶನ ಮುಗಿದ ನಂತರ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಹಳ್ಳಿಗಳಿಗೆ ಹೋಗಿ, ಹಳ್ಳಿ ಜನರಿಗೆ ಪ್ರಾಮುಖ್ಯತೆ ನೀಡಿ ಎಂದು ಅಮಿತ್ ಶಾ ಹೇಳಿದ್ದಾರೆ ಎಂದರು.

SCROLL FOR NEXT