ರಾಜ್ಯ

ಇಬ್ಬರು ಕಾರ್ಯಕರ್ತರ ವಿರುದ್ಧ ರೌಡಿಶೀಟರ್ ಪ್ರಕರಣ ದಾಖಲು: ಆಕ್ರೋಶಗೊಂಡ ಕನ್ನಡ ಪರ ಸಂಘಟನೆಗಳು

Ramyashree GN

ಬೆಳಗಾವಿ: ವಿಧಾನಸಭಾ ಚುನಾವಣೆಗೂ ಮುನ್ನ ಕನ್ನಡ ಕಾರ್ಯಕರ್ತರ ಮೇಲೆ ರೌಡಿಶೀಟರ್ ಪ್ರಕರಣ ದಾಖಲಿಸಿರುವ ಪೊಲೀಸ್ ಇಲಾಖೆ ವಿರುದ್ಧ ಕನ್ನಡ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಇತ್ತೀಚೆಗೆ ಬೆಳಗಾವಿ ಮಹಾನಗರ ಪಾಲಿಕೆಗೆ (ಬಿಸಿಸಿ) ಮರಾಠಿ ಭಾಷಿಕ ಮೇಯರ್ ಮತ್ತು ಉಪಮೇಯರ್ ಆಯ್ಕೆ ನಡೆದಿರುವುದು ಕನ್ನಡ ಸಂಘಟನೆಗಳನ್ನು ಮತ್ತಷ್ಟು ಕೆರಳಿಸಿದೆ.

ಇದೀಗ ಕನ್ನಡಪರ ಹೋರಾಟಗಾರರನ್ನು ರೌಡಿ ಶೀಟರ್ ಎಂದು ಕರೆದು ನೋಟೀಸ್ ಜಾರಿ ಮಾಡಿದ್ದು, ಚುನಾವಣೆ ವೇಳೆ ಉತ್ತಮವಾಗಿ ನಡೆದುಕೊಳ್ಳುವುದಾಗಿ ಅಫಿಡವಿಟ್ ಸಲ್ಲಿಸುವಂತೆ ಹೇಳಿರುವುದು ಕನ್ನಡಪರ ಸಂಘಟನೆಗಳನ್ನು ಮತ್ತಷ್ಟು ಕೆರಳಿಸಿದೆ.

ರಾಜ್ಯ ವಿಧಾನಸಭೆ ಅಧಿವೇಶನಕ್ಕೆ ಸಮಾನಾಂತರವಾಗಿ 2019 ರಲ್ಲಿ ನಡೆದ ಮಹಾ ಮೇಳಾವ್‌ನಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮುಖಂಡ ದೀಪಕ್ ದಳವಿ ಅವರ ಮುಖಕ್ಕೆ ಮಸಿ ಬಳಿದ ಕನ್ನಡಪರ ಹೋರಾಟಗಾರರಾದ ಸಂಪತ್‌ಕುಮಾರ್ ದೇಸಾಯಿ ಮತ್ತು ಅನಿಲ್ ದಡ್ಡಿಮನಿ ವಿರುದ್ಧ ನಗರ ಪೊಲೀಸರು ರೌಡಿಶೀಟರ್ ಪ್ರಕರಣ ದಾಖಲಿಸಿದ್ದಾರೆ.

ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ತುರ್ತು ಸಭೆಯಲ್ಲಿ ಇಬ್ಬರ ಮೇಲಿನ ರೌಡಿ ಶೀಟರ್ ಪ್ರಕರಣ ಕೈಬಿಡುವಂತೆ ಕನ್ನಡಪರ ಸಂಘಟನೆಗಳು ಪೊಲೀಸರಿಗೆ ಒತ್ತಾಯಿಸಿದವು. ಈ ನಿಟ್ಟಿನಲ್ಲಿ ಫೇಸ್ ಬುಕ್, ವಾಟ್ಸಾಪ್, ಟ್ವಿಟರ್‌ನಲ್ಲಿ ಆನ್‌ಲೈನ್ ಅಭಿಯಾನ ಆರಂಭವಾಗಿದೆ. ಸರ್ಕಾರ ‘ಕನ್ನಡಿಗ ವಿರೋಧಿ’ ಎಂದು ಪ್ರಚಾರಕರು ಆರೋಪಿಸಿದ್ದಾರೆ.

SCROLL FOR NEXT