ರಾಜ್ಯ

ಮಂಗಳೂರು ಪೊಲೀಸ್ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ: ಎಡಿಜಿಪಿ ಮುಂದೆ ಸಾಮಾಜಿಕ ಕಾರ್ಯಕರ್ತೆ ಆರೋಪ

Sumana Upadhyaya

ಮಂಗಳೂರು: ಮಂಗಳೂರು ಪೊಲೀಸ್ ಇಲಾಖೆಯಲ್ಲಿ ಲಂಚಾವತಾರ ತಾಂಡವವಾಡುತ್ತಿದೆ, ಕಷ್ಟ ಹೇಳಿಕೊಂಡು ನ್ಯಾಯಕೇಳಲು ಹೋಗುವ ಸಾಮಾನ್ಯ ಜನರಿಗೆ ಲಂಚಬಾಕ ಪೊಲೀಸ್ ಅಧಿಕಾರಿಗಳಿಂದ ಬಹಳ ತೊಂದರೆಯಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತೆ ನಗರ ಪೊಲೀಸ್ ಆಯುಕ್ತರ ಮುಂದೆಯೇ ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ದೂರು ನೀಡಿರುವ ಪ್ರಸಂಗ ನಡೆದಿದೆ.

ಮಂಗಳೂರಿನಲ್ಲಿ ಪೊಲೀಸ್ ಅಧಿಕಾರಿಗಳದ್ದೇ ಲಾಡ್ಜ್, ಸಲೂನ್ ಗಳು ಕಾರ್ಯಾಚರಣೆ ಮಾಡುತ್ತಿವೆ. ನಾವೇನಾದರೂ ಇದರ ಬಗ್ಗೆ ದೂರು ನೀಡಿದ್ದಲ್ಲಿ ನಮ್ಮ ಮೇಲೆ ಪ್ರಕರಣ ದಾಖಲಿಸುತ್ತಾರೆ. ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಪೊಲೀಸರು ಕುಣಿಯುತ್ತಿದ್ದಾರೆ. ಜನಸಾಮಾನ್ಯರ ಸಮಸ್ಯೆಗಳಿಗೆ ಕಿವಿಗೊಡುತ್ತಿಲ್ಲ ಎಂದು ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಆರೋಪಿಸಿದ್ದಾರೆ.

ನಿನ್ನೆ ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಸಾರ್ವಜನಿಕ ಕುಂದುಕೊರತೆ ಅಹವಾಲು ಸ್ವೀಕಾರ ಸಭೆ ನಡೆಸಿದರು. 

ಮಂಗಳೂರಿನಲ್ಲಿ ಇರುವುದು ಒಂದೇ ಮಹಿಳಾ ಠಾಣೆ, ಅದು ಪಾಂಡೇಶ್ವರದಲ್ಲಿದೆ. ಆ ಠಾಣೆಯ ಇಬ್ಬರು ಇನ್ಸ್ ಪೆಕ್ಟರ್ ಅವರಿಗೆ ಜನರ ಸಮಸ್ಯೆಗಿಂತ ಲಂಚದ್ದೇ ಚಿಂತೆ. ಸಾಕ್ಷಿ ಬೇಕಾದರೆ ನಾನು ಕೊಡುತ್ತೇನೆ, ಸಂತ್ರಸ್ತರನ್ನು ನಿಮ್ಮೆದುರು ತಂದು ತೋರಿಸುತ್ತೇನೆ ಎಂದು ಸಿಟ್ಟಿನಿಂದ ಪ್ರಸನ್ನ ರವಿ ದೂರಿದರು.

ನಾವು ಕಮಿಷನರ್ ಶಶಿಕುಮಾರ್ ಅವರನ್ನು ಕಚೇರಿಯಲ್ಲಿ ಭೇಟಿ ಮಾಡಲು ಅವಕಾಶ ಕೇಳಿದರೆ ಕೊಡುವುದಿಲ್ಲ, ಅವಕಾಶ ಕೊಟ್ಟರೆ ತಾನೇ ಸಮಸ್ಯೆ ಹೇಳಲು ಸಾಧ್ಯ, ಪೊಲೀಸರು ಜನಸಾಮಾನ್ಯರು ಸಮಸ್ಯೆಗಳಿಗೆ ಕಿವಿಗೊಡುವುದಿಲ್ಲ ಎಂದು ಆರೋಪಿಸಿದರು.

ಆಯುಕ್ತರ ಕಚೇರಿಯಲ್ಲಿ ಸಿಸಿಟಿವಿಯೇ ಇಲ್ಲ, ಈ ಹಿಂದೆ ಎಲ್ಲ ಆಯುಕ್ತರು ಜನಸಾಮಾನ್ಯರಿಗೆ ಉಪಯೋಗವಾಗುವಂತೆ ಹಲವು ಕಾರ್ಯಕ್ರಮಗಳನ್ನು ಮಾಡುತ್ತಿದ್ದರು. ಶಶಿಕುಮಾರ್ ಅವರು ಆಯುಕ್ತರಾದ ಮೇಲೆ ಜನಸಾಮಾನ್ಯರ ಮಾತನಾಡುವ ಹಕ್ಕನ್ನೇ ಕಳೆದುಕೊಂಡಿದ್ದಾರೆ. ಸಿಸಿಟಿವಿ ಯಾಕೆ ಹಾಕಿಲ್ಲ ಎಂದು ಕೇಳಿದರೆ ನಮ್ಮ ಮೇಲೆ ಪ್ರಕರಣ ದಾಖಲಿಸುತ್ತಾರೆ ಎಂದು ಆಯುಕ್ತರ ಮುಂದೆಯೇ ಪ್ರಸನ್ನ ರವಿ ಎಡಿಜಿಪಿ ಮುಂದೆ ಸಮಸ್ಯೆ ತೋಡಿಕೊಂಡರು.

ಈ ಬಗ್ಗೆ ಸಭೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಎಡಿಜಿಪಿ ಅಲೋಕ್ ಕುಮಾರ್, ಮಂಗಳೂರು ನಗರದಲ್ಲಿ ನಡೆಯುತ್ತಿರುವ ವೇಶ್ಯಾವಾಟಿಕೆ, ಮರಳುಗಾರಿಕೆ, ಜೂಜು, ಪೊಲೀಸ್ ಇಲಾಖೆಯ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಆದರೆ ಯಾರೂ ಕೂಡ ಸೂಕ್ತ ದಾಖಲೆಗಳೊಂದಿಗೆ ದೂರು ನೀಡಿಲ್ಲ, ಒಬ್ಬಿಬ್ಬರು ಹೆಸರು ಹೇಳಿ ಆರೋಪ ಮಾಡಿದ್ದಾರೆ. ಈ ಪ್ರಕರಣಗಳನ್ನು ತನಿಖಾ ತಂಡ ರಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

SCROLL FOR NEXT