ರಾಜ್ಯ

ಕೊಡಗು: ಹುಲಿ ದಾಳಿಗೆ ಮತ್ತೊಬ್ಬ ವ್ಯಕ್ತಿ ಬಲಿ, 24 ಗಂಟೆಯಲ್ಲಿ ಇಬ್ಬರ ಸಾವು

Lingaraj Badiger

ಕೊಡಗು: ಕೊಡಗಿನಲ್ಲಿ ಹುಲಿ ದಾಳಿ ಮುಂದುವರಿದಿದ್ದು, ಪೊನ್ನಂಪೇಟೆ ತಾಲೂಕಿನ ನಾಲ್ಕೇರಿ ಗ್ರಾಮದ ಬಳಿ ವ್ಯಾಘ್ರ ದಾಳಿಗೆ ಸೊಮವಾರ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದಾರೆ. ಇದರೊಂದಿಗೆ ಕಳೆದ 24 ಗಂಟೆಯಲ್ಲಿ ಹುಲಿ ದಾಳಿಗೆ ಒಂದೇ ಗ್ರಾಮಕ್ಕೆ ಸೇರಿದ ಇಬ್ಬರು ಮೃತಪಟ್ಟಿದ್ದಾರೆ.

ಇಂದು ಬೆಳಗ್ಗೆ ಮೈಸೂರು ಜಿಲ್ಲೆಯ ಕೊಳವಿಗೆ ಹಾಡಿ ನಿವಾಸಿ, ಕೃಷಿ ಕಾರ್ಮಿಕ ರಾಜು(65) ಅವರು ಹುಲಿ ದಾಳಿಗೆ ಬಲಿಯಾಗಿದ್ದಾರೆ. ಬೆಳಗ್ಗೆ ತನ್ನ ಮನೆಯಿಂದ ಹೊರ ಬಂದ ರಾಜು ಅವರ ಮೇಲೆ ಕಾಫಿ ತೋಟದಲ್ಲಿ ಅಡಗಿದ್ದ ಹುಲಿ ದಿಢೀರನೇ ದಾಳಿ ನಡೆಸಿದೆ. ತಲೆ ಹಾಗೂ ಕುತ್ತಿಗೆ ಭಾಗವನ್ನು ತೀವ್ರವಾಗಿ ಗಾಯಗೊಳಿಸಿದ್ದರಿಂದ ರಾಜು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ನಾಗರಹೊಳೆ ಎಸಿಎಫ್ ಗೋಪಾಲ್ ಮತ್ತು ಹುಲಿ ಕಾರ್ಯಾಚರಣೆ ಪಡೆಯ ಸಿಬ್ಬಂದಿ ತೆರಳಿದ್ದಾರೆ. ರಾಜು ಅವರನ್ನು ಕೊಂದ ಹುಲಿ ಕಾಫಿ ತೋಟದಲ್ಲಿ ಅಡಗಿರುವುದು ಗೋಚರಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿ ಹುಲಿಯನ್ನು ಸೆರೆ ಹಿಡಿಯಲು ಸಿದ್ಧತೆ ನಡೆಸಿದ್ದಾರೆ.

ಭಾನುವಾರ ಸಂಜೆ ಹುಲಿ ದಾಳಿಗೆ ಚೇತನ್(18) ಎಂಬ ಯುವಕ ಮೃತಪಟ್ಟಿದ್ದರು. ಚೇತನ್ ಅಂತ್ಯಕ್ರಿಯೆಯಲ್ಲಿ  ಭಾಗವಹಿಸಲು ಬಂದಿದ್ದ ರಾಜು, ತಮ್ಮ ಮಗ ರಾಜೇಶ್ ಅವರೊಂದಿಗೆ ಉಳಿದುಕೊಂಡಿದ್ದರು. ಹುಲಿ ದಾಳಿ ನಡೆಸಿದ ಖಾಸಗಿ ಎಸ್ಟೇಟ್‌ನಲ್ಲಿ ರಾಜೇಶ್ ಎಸ್ಟೇಟ್ ಕಾರ್ಮಿಕನಾಗಿದ್ದು, ಅವರು ಎಸ್ಟೇಟ್‌ನ ಲೈನ್ ಹೌಸ್‌ನಲ್ಲಿ ವಾಸವಾಗಿದ್ದಾರೆ.

24 ಗಂಟೆಯ ಅವಧಿಯಲ್ಲಿ ಎರಡು ಸಾವು ಸಂಭವಿಸಿದ್ದು, ಆಕ್ರೋಶಗೊಂಡ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದರು. ಗ್ರಾಮಸ್ಥರ ಮನವಿಗೆ ಈ ಭಾಗದ ಆರ್‌ಎಫ್‌ಒ ದಕ್ಷತೆಯಿಂದ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಅವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿದರು.

SCROLL FOR NEXT