ರಾಜ್ಯ

ಯಾದಗಿರಿ: ಕಲುಷಿತ ನೀರು ಸೇವಿಸಿ ಮಹಿಳೆಯರಿಬ್ಬರ ಸಾವು, 34ಕ್ಕೂ ಹೆಚ್ಚು ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು

Vishwanath S

ಯಾದಗಿರಿ: ಕಳೆದ 24 ಗಂಟೆಗಳಲ್ಲಿ ಗುರುಮಠಕಲ್‌ ತಾಲೂಕಿನ ಅನುಪುರ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಇಬ್ಬರು ಸಾವನ್ನಪ್ಪಿದ್ದು, 34 ಮಂದಿ ಅಸ್ವಸ್ಥರಾಗಿದ್ದಾರೆ.

ಯಾದಗಿರಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಗುರುರಾಜ ಹಿರೇಗೌಡರ ಅವರು ದೂರವಾಣಿ ಮೂಲಕ ಮಾತನಾಡಿ, ಕಳೆದ 24 ಗಂಟೆಗಳಲ್ಲಿ ಗುರುಮಠಕಲ್‌  ತಾಲೂಕಿನ ಅನಪುರ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಮಕ್ಕಳು ಸೇರಿದಂತೆ 34 ಮಂದಿ ಅಸ್ವಸ್ಥರಾಗಿದ್ದಾರೆ. ಈ ಪೈಕಿ 15 ಮಂದಿಯನ್ನು ಯಾದಗಿರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರನ್ನು ಅನುಪುರ ಗ್ರಾಮದ ಸಮೀಪದ ನಾರಾಯಣಪೇಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಮಂಗಳವಾರ ಬೆಳಗ್ಗೆ ನಾರಾಯಣಪೇಟೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ 35 ವರ್ಷದ ಮಹಿಳೆ ಸಾವಿತ್ರಮ್ಮ ಮೃತಪಟ್ಟಿದ್ದಾರೆ. ಇಂದು ನಾರಾಯಣಪೇಟೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 72 ವರ್ಷದ ಸಾಯಮ್ಮ ಅವರ ಸ್ಥಿತಿ ಹದಗೆಟ್ಟಿದ್ದರಿಂದ ಅವರನ್ನು ತೆಲಂಗಾಣ ರಾಜ್ಯದ ಮಹೆಬೂಬ್‌ನಗರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 

ಅಗತ್ಯವಿರುವವರಿಗೆ ಚಿಕಿತ್ಸೆ ನೀಡಲು 3 ವೈದ್ಯರನ್ನು ಒಳಗೊಂಡ 15 ಸದಸ್ಯರ ವೈದ್ಯಕೀಯ ತಂಡವನ್ನು ಅನುಪುರಕ್ಕೆ ಕಳುಹಿಸಲಾಗಿದೆ. ಬುಧವಾರ ಮಧ್ಯಾಹ್ನದಿಂದ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ ಎಂದು ಅನುಪುರದಲ್ಲಿ ಬೀಡುಬಿಟ್ಟಿರುವ ಹಿರೇಗೌಡರು ತಿಳಿಸಿದ್ದಾರೆ.

ಡಾ.ಹಿರೇಗೌಡರ ಮಾತನಾಡಿ, ಅನುಪುರ ಗ್ರಾಮಕ್ಕೆ ನೀರಿನ ಟ್ಯಾಂಕ್ ನಿಂದ ಪೈಪ್ ಲೈನ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಮಾರೆಮ್ಮ ದೇವಸ್ಥಾನ ಹಾಗೂ ಎಸ್‌ಸಿ ಓಣಿ ಬಳಿ 2 ಕಡೆ ಪೈಪ್‌ನಿಂದ ನೀರು ಸೋರಿಕೆಯಾಗಿದೆ. ಪೈಪ್ ಲೈನ್ ದುರಸ್ತಿ ಕಾರ್ಯ ಆರಂಭವಾಗಿದೆ ಎಂದರು.

SCROLL FOR NEXT