ರಾಜ್ಯ

ಈಜಿಪುರ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸದಿದ್ದಲ್ಲಿ ನೀವೆಲ್ಲೇ ಹೋದರೂ ಪ್ರತಿಭಟನೆ: ಸಿಎಂ ಬೊಮ್ಮಾಯಿಗೆ ರಾಮಲಿಂಗಾ ರೆಡ್ಡಿ ಎಚ್ಚರಿಕೆ

Manjula VN

ಬೆಂಗಳೂರು: ಮುಂದಿನ 15 ದಿನಗಳ ಒಳಗಾಗಿ ಈಜಿಪುರ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸದಿದ್ದಲ್ಲಿ ಎಲ್ಲಿಯೇ ಹೋದರೂ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿಯವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಶನಿವಾರ ಎಚ್ಚರಿಕೆ ನೀಡಿದ್ದಾರೆ.

ಈಜಿಪುರ ಜಂಕ್ಷನ್ ನಿಂದ ಮಡಿವಾಳ ಕೇಂದ್ರೀಯ ಸದನದವರೆಗೂ ಮೇಲ್ ಸೇತುವೆ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ಕೆಪಿಸಿಸಿ ಕಾರ್ಯಧ್ಯಕ್ಷ ರಾಮಲಿಂಗಾ ರೆಡ್ಡಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಕೋರಮಂಗಲದಲ್ಲಿ ನಿನ್ನೆ ಬೃಹತ್ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಹಿನ್ನೆಲೆಯಲ್ಲಿ ನೂರಾರು ನಿವಾಸಿಗಳು ಮತ್ತು ಕಾರ್ಯಕರ್ತರು ಸೋನಿ ವರ್ಲ್ಡ್ ಸಿಗ್ನಲ್‌ನಲ್ಲಿ ಜಮಾಯಿಸಿದರು. ಇದರಿಂದಾಗಿ ಕೆಲ ಕಾಲ ಸಂಚಾರ ದಟ್ಟಣೆ ಸಮಸ್ಯೆ ಎದುರಾಗಿತ್ತು.

ದಕ್ಷಿಣ ಮತ್ತು ಪೂರ್ವ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಈಜಿಪುರದಿಂದ ಕೇಂದ್ರೀಯ ಸದನದವರೆಗಿನ ಮೇಲ್ಸೇತುವೆ ಜನರಿಗೆ ಅತ್ಯಗತ್ಯವಾಗಿದೆ.ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಈ ಯೋಜನೆಗೆ ಚಾಲನೆ ನೀಡಲಾಗಿದ್ದು, ಶೇ.32ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಯಾವುದೇ ಪ್ರಗತಿಯಾಗಿಲ್ಲ. ಶೀಘ್ರದಲ್ಲಿಯೇ ಯೋಜನೆ ಕಾರ್ಯಗತಗೊಳಿಸುವಂತೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಮಂಜುನಾಥ್ ಪ್ರಸಾದ್, ಅನಿಲ್ ಕುಮಾರ್, ಗೌರವ್ ಗುಪ್ತಾ ಸೇರಿದಂತೆ ಬಿಬಿಎಂಪಿ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಲಾಗಿತ್ತು. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರನ್ನೂ ಭೇಟಿ ಮಾಡಲಾಗಿದೆ.

ಬಿಬಿಎಂಪಿ ಅಥವಾ ಸರ್ಕಾರ ಕರ್ನಾಟಕ ರೂರಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಲಿಮಿಟೆಡ್ ಮೂಲಕ ಯೋಜನೆಯನ್ನು ಕಾರ್ಯಗತಗೊಳಿಸಬೇಕು ಎಂದು ರಾಮಲಿಂಗಾ ರೆಡ್ಡಿಯವರು ಆಗ್ರಹಿಸಿದ್ದಾರೆ.

ಪ್ರತಿಭಟನೆಯಲ್ಲಿ ಕೋರಮಂಗಲ ನಿವಾಸಿ ಹಾಗೂ ಸಿಟಿಜನ್ ಆ್ಯಕ್ಷನ್ ಫೋರಂ ಸದಸ್ಯ ನಿತಿನ್ ಶೇಷಾದ್ರಿ ಭಾಗವಹಿಸಿದ್ದರು.

‘ಎಲಿವೇಟೆಡ್ ರಸ್ತೆ ಯೋಜನೆ ಬಹಳ ದಿನಗಳಿಂದ ನನೆಗುದಿಗೆ ಬಿದ್ದಿದೆ, ಕಾಮಗಾರಿ ತಡವಾಗುತ್ತಿರುವುದಕ್ಕೆ ಹಲವು ಕಾರಣಗಳನ್ನು ನೀಡಲಾಗುತ್ತಿದೆ. ಆದರೆ, ಇದಕ್ಕೆ ಇರುವ ಪ್ರಮುಖ ಕಾರಣ ಇಚ್ಛಾಶಕ್ತಿಯ ಕೊರತೆಯಾಗಿದೆ ಎಂದು ಶೇಷಾದ್ರಿ ಹೇಳಿದ್ದಾರೆ.

SCROLL FOR NEXT