ಡಿ ರೂಪಾ ಮತ್ತು ರೋಹಿಣಿ ಸಿಂಧೂರಿ ಪತಿ(ಸಂಗ್ರಹ ಚಿತ್ರ) 
ರಾಜ್ಯ

'ಈ ರೂಪಾ ಯಾರು, ರೋಹಿಣಿ ಮೇಲೆ ಹೊಟ್ಟೆಕಿಚ್ಚು ಇರಬೇಕು ಅಥವಾ ಮಾನಸಿಕ ಸಮಸ್ಯೆ ಇರಬೇಕು, ದೂರು ನೀಡುತ್ತೇನೆ': ಪತಿ ಗರಂ

IAS ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು IPS ಅಧಿಕಾರಿ ಡಿ.ರೂಪಾ ನಡುವಿನ ಫೋಟೋ ಬಹಿರಂಗ-ಟ್ವಿಟ್ಟರ್ ವಾರ್ ಮುಂದಕ್ಕೆ ಹೋಗಿ ಜಗಳ ತಾರಕಕ್ಕೇರಿದೆ. ಸರ್ಕಾರದ ಮಟ್ಟದಲ್ಲಿ, ರಾಜಕೀಯವಾಗಿ ಸಾರ್ವಜನಿಕರಲ್ಲಿ ಬಹು ಚರ್ಚಿತ ವಿಷಯವಾಗಿದೆ.

ಬೆಂಗಳೂರು: IAS ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು IPS ಅಧಿಕಾರಿ ಡಿ.ರೂಪಾ ನಡುವಿನ ಫೋಟೋ ಬಹಿರಂಗ-ಟ್ವಿಟ್ಟರ್ ವಾರ್ ಮುಂದಕ್ಕೆ ಹೋಗಿ ಜಗಳ ತಾರಕಕ್ಕೇರಿದೆ. ಸರ್ಕಾರದ ಮಟ್ಟದಲ್ಲಿ, ರಾಜಕೀಯವಾಗಿ ಸಾರ್ವಜನಿಕರಲ್ಲಿ ಬಹು ಚರ್ಚಿತ ವಿಷಯವಾಗಿದೆ. ಇಬ್ಬರು ವಿದ್ಯಾವಂತ ಸರ್ಕಾರದ ಉನ್ನತ ಅಧಿಕಾರಿಗಳು ಈ ರೀತಿ ಕೀಳುಮಟ್ಟದಲ್ಲಿ ಜಗಳವಾಡುತ್ತಿರುವುದು ನಾಚಿಕೆಗೇಡಿನ ವಿಚಾರ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಆರೋಪಗಳಿಗೆ ಸಂಬಂಧಪಟ್ಟಂತೆ ಇದೇ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ರೋಹಿಣಿ ಸಿಂಧೂರಿಯವರ ಪತಿ ಸುಧೀರ್ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ಮೊದಲನೆಯದಾಗಿ ರೂಪಾ ಎನ್ನುವವರು ಯಾರು, ಅವರು ಸಿಂಧೂರಿಯವರ ಇಲಾಖೆಯವರಾ, ಅವರ ಹಿರಿಯ ಅಧಿಕಾರಿಯಾ, ಸರ್ಕಾರಕ್ಕೆ ಸಂಬಂಧಪಟ್ಟವರಾ, ರೋಹಿಣಿ ಬಗ್ಗೆ ಮಾತನಾಡುವಷ್ಟು, ಅವರ ವೈಯಕ್ತಿಕ ವಿಚಾರಗಳನ್ನು ಕೆದಕುವಷ್ಟು ವೈಯಕ್ತಿಕ ದ್ವೇಷ, ಅಜೆಂಡಾ ಏನಿದೆ ಎಂದು ಪ್ರಶ್ನಿಸಿದರು.

ರೂಪಾ ಯಾರು: ರೋಹಿಣಿ ಸಿಂಧೂರಿಗೂ ರೂಪಾ ಅವರಿಗೂ ಯಾವುದೇ ಸಂಬಂಧವಿಲ್ಲ, ರೋಹಿಣಿ ಮೇಲೆ ಹೊಟ್ಟೆಕಿಚ್ಚಿನಿಂದ ಈ ರೀತಿ ಮಾತನಾಡುತ್ತಿದ್ದಾರೆ ಎಂದು ನನಗೆ ಅನಿಸುತ್ತಿದೆ. ಅವರಿಗೆ ಮಾನಸಿಕ ಸಮಸ್ಯೆಯಿರಬಹುದು, ಅವರು ಅನೇಕ ಸೋಷಿಯಲ್ ಮೀಡಿಯಾ ಅಕೌಂಟ್ ಹೊಂದಿದ್ದಾರೆ. ಪಬ್ಲಿಸಿಟಿಗೋಸ್ಕರ ಈ ರೀತಿ ಮಾತನಾಡಿರಬಹುದು. ರೋಹಿಣಿ ಸಿಂಧೂರಿಯವರಿಗೆ ಯಾವುದೇ ಸೋಷಿಯಲ್ ಮೀಡಿಯಾ ಅಕೌಂಟ್ ಇಲ್ಲ, ಪಬ್ಲಿಸಿಟಿ ಅವರಿಗೆ ಬೇಕಾಗಿಲ್ಲ, ಕೆಲಸವೇ ಮಾತನಾಡಬೇಕೆಂಬ ಇಚ್ಛೆ ಹೊಂದಿರುವವರು ಎಂದು ಸುಧೀರ್ ರೆಡ್ಡಿ ಹೇಳಿದರು.

ಫೋಟೋ ಹೇಗೆ ಸಿಕ್ಕಿತು: ಇನ್ನು ರೋಹಿಣಿ ಸಿಂಧೂರಿಯವರಿಗೆ ಸಂಬಂಧಿಸಿದ ವೈಯಕ್ತಿಕ ಫೋಟೋಗಳನ್ನು ರೂಪಾ ಅವರು ಲೀಕ್ ಮಾಡಿರುವ ಬಗ್ಗೆ ಮಾತನಾಡಿದ ಸುಧೀರ್ ರೆಡ್ಡಿ, ಪೊಲೀಸ್ ಅಧಿಕಾರಿಯಾಗಿರುವ ಅವರಿಗೆ ಫೋಟೋ ಕಳುಹಿಸಿದವರು ಯಾರು, ಯಾರು ಕೊಟ್ಟಿದ್ದಾರೆ ಅವರಿಗೆ, ಮೂರು ಮಂದಿ ಪುರುಷರಿಗೆ ಫೋಟೋ ಕಳುಹಿಸಿದ್ದಾರೆ ಎನ್ನುತ್ತಾರೆ, ಆ ಮೂರು ಜನ ಯಾರು ಎಂದು ಕೇಳಲಿ, ಫೋಟೋ ಎಲ್ಲಿಂದ ಬಂತು ಎಂದು ಬಹಿರಂಗಪಡಿಸಲಿ, ಯಾರದ್ದಾದರೂ ಫೋನ್ ನ್ನು ಹ್ಯಾಕ್ ಮಾಡಿದ್ದಾರೆಯೇ ಎಂಬ ಸಂಶಯ ನನಗೆ ಬರುತ್ತಿದೆ, ಅಥವಾ ಆಪ್, ಸಾಫ್ಟ್ ವೇರ್ ಮೂಲಕ ಎಡಿಟ್ ಮಾಡಿರಬಹುದಲ್ಲವೇ ಎಂದು ಪ್ರಶ್ನಿಸಿದರು.

ನಾನು ಕನ್ನಡಿಗ: ನಾನು ಹುಟ್ಟಿದ್ದು ಬೆಳೆದಿದ್ದೆಲ್ಲಾ ಕರ್ನಾಟಕ ಬೆಂಗಳೂರಿನಲ್ಲಿ, ನಾನು ಪಕ್ಕಾ ಕನ್ನಡಿಗ, ಆಂಧ್ರದಿಂದ ಬಂದವರು ಎನ್ನುತ್ತಾರೆ, ಹೇಗಾಗುತ್ತದೆ. ನಾನು ಹುಟ್ಟುವುದಕ್ಕೆ ಮೊದಲೇ 60-70 ವರ್ಷಗಳ ಹಿಂದೆ ನನ್ನ ತಂದೆ ಆಂಧ್ರ ತೊರೆದು ಇಲ್ಲಿಗೆ ಬಂದಿದ್ದಾರೆ. ಮಾತೆತ್ತಿದರೆ ಅವರು ನಾವು ಆಂಧ್ರದವರು ಎನ್ನುತ್ತಾರೆ, ಮೊದಲಿನಿಂದಲೇ ಇಲ್ಲಿ ನೂರಾರು ಎಕರೆ ರಿಯಲ್ ಎಸ್ಟೇಟ್ ಮಾಡುತ್ತಿದ್ದಾರೆ. ಹಿಂದಿನಿಂದಲೂ ನಾವು ಶ್ರೀಮಂತ ಕುಟುಂಬ, ಇಲ್ಲಿ ಯಾರನ್ನು ಬೇಕಾದರೂ ಕೇಳಿ ನಮ್ಮ ಬಗ್ಗೆ ಹೇಳುತ್ತಾರೆ, ನಾವು ಓದಿಕೊಂಡು ಒಳ್ಳೆ ಉದ್ಯೋಗದಲ್ಲಿದ್ದೇವೆ. ನಾನು ಮದುವೆಯಾಗುವ ಮೊದಲು ಅಮೆರಿಕದಲ್ಲಿ ಎಂಜಿನಿಯರಿಂಗ್ ಉದ್ಯೋಗದಲ್ಲಿದ್ದೆ. ನಂತರ ಇಲ್ಲಿಗೆ ಬಂದೆ. ನಾನು ರೂಪಾ ವಿರುದ್ಧ ಪೊಲೀಸ್ ಕಂಪ್ಲೇಂಟ್ ಕೊಡುತ್ತೇನೆ. ನಮ್ಮ ಬಗ್ಗೆ ವೈಯಕ್ತಿಕ ತೇಜೋವಧೆ ಮಾಡುತ್ತಿರುವುದು ಸರಿಯಲ್ಲ, ಮಾನನಷ್ಟ ಮೊಕದ್ದಮೆಗೆ ಹೂಡುತ್ತೇನೆ ಎಂದು ಎಚ್ಚರಿಸಿದರು.

ಡಿಕೆ ರವಿ ಬಗ್ಗೆ ಮಾತನಾಡುವುದು ಸರಿಯಲ್ಲ: ಡಿ ಕೆ ರವಿಯವರು 2015ರಲ್ಲಿ ತೀರಿಕೊಂಡ ನಂತರ ಏನೇನೋ ವಿಷಯಗಳು ಹೊರಬಂದವು. ನಾನು ಪತಿಯಾಗಿ ರೋಹಿಣಿ ಸಿಂಧೂರಿಯವರ ಪರ ನಿಂತಿದ್ದೇನೆ, ಆ ವಿಚಾರದಲ್ಲಿ ಏನೆಲ್ಲಾ ಆಗಿವೆ, ನಾವು ಸಾಕಷ್ಟು ಅನುಭವಿಸಿದ್ದೇವೆ. ಡಿ ಕೆ ರವಿಯವರು ಇಂದು ಇಲ್ಲ, ಇಲ್ಲದವರ ಬಗ್ಗೆ ಈಗ ಮಾತನಾಡುವುದು ಸರಿಯಲ್ಲ, ಅವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು.

ಗಾಯಕನಾಗಿ  ಲಕ್ಕಿ ಆಲಿ ಒಳ್ಳೆಯ ಹಾಡುಗಾರ ನಮ್ಮ ಮದುವೆ 2010ರ ಡಿಸೆಂಬರ್ ನಲ್ಲಿ ನಡೆಯಿತು, ಅದಕ್ಕೆ ಲಕ್ಕಿ ಆಲಿ ಬಂದಿದ್ದರು. 2011ರಲ್ಲಿ ನಾವು ಜಾಗ ಖರೀದಿಸಿದ್ದು. ವೈಯಕ್ತಿಕವಾಗಿ ನನ್ನಲ್ಲಿ ಸಾಕಷ್ಟು ದಾಖಲೆಗಳಿವೆ, ನಾವು ಕೋರ್ಟ್ ಲ್ಲಿ ಕೇಸು ನೋಡಿಕೊಳ್ಳುತ್ತಿದ್ದೇವೆ. 2011ಲ್ಲಿ ಆಸ್ತಿ ಖರೀದಿಸಿ 2016ರಲ್ಲಿ ಕಂಪೌಂಡ್ ಹಾಕಿದೆವು. ನಾವು ಹಣಕೊಟ್ಟು ಖರೀದಿಸಿದ ಜಾಗವನ್ನು ಬಿಡಲು ಸಾಧ್ಯವೇ, ನಾವು ಕೋರ್ಟ್ ಲ್ಲಿ ಹೋರಾಡುತ್ತಿದ್ದೇವೆ, ಈ ಮಾಹಿತಿಯೆಲ್ಲ ರೂಪಾ ಅವರಿಗೆ ಹೇಗೆ ಗೊತ್ತಾಗುತ್ತಿದೆ ಯಾರು ಅವರಿಗೆ ಕೊಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ರೋಹಿಣಿ ಸಿಂಧೂರಿಯವರ ಫೋಟೋಗಳನ್ನು ಬಹಿರಂಗಪಡಿಸಿ ಆ ಮೂವರು ಯಾರು ಎಂದು ಹೇಳದಿದ್ದರೆ ನಾನು ಖಂಡಿತಾ ಕ್ರಮ ಕೈಗೊಳ್ಳುತ್ತೇನೆ, ಮಹಿಳಾ ಅಧಿಕಾರಿಯಾಗಿ ಮತ್ತೊಬ್ಬ ಮಹಿಳೆಯಾಗಿ ಈ ರೀತಿ ಮಾಡುತ್ತಿರುವುದು ತಪ್ಪು ಅದಲ್ಲದೆ ಅದು ರೋಹಿಣಿ ಸಿಂಧೂರಿಯವರ ಹಳೆಯ ಫೋಟೋಗಳು ಎಂದು ಸುಧೀರ್ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT