ರಾಜ್ಯ

ರಾಜ್ಯದಲ್ಲಿ ನಾಗರಿಕ ವಿಮಾನ ತಯಾರಿಕಾ ಘಟಕಗಳ ಸ್ಥಾಪನೆಯಾಗಬೇಕು: ಸಿಎಂ ಬೊಮ್ಮಾಯಿ

Manjula VN

ಬೆಂಗಳೂರು: ರಾಜ್ಯದಲ್ಲಿ ಸಂಪೂರ್ಣ ವಾಣಿಜ್ಯ ನಾಗರಿಕ ವಿಮಾನ ತಯಾರಿಕಾ ಘಟಕಗಳ ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಹೇಳಿದರು.

ಸೋಮವಾರ ವಿಧಾನಮಂಡಲದಲ್ಲಿ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆ ವೇಳೆ ಮುಖ್ಯಮಂತ್ರಿಗಳು ಮಾತನಾಡಿದರು.

ಪ್ರಸ್ತುತ ಭಾರತದಲ್ಲಿ ರಕ್ಷಣಾ ಮತ್ತು ಏರೋಸ್ಪೇಸ್‌ನಲ್ಲಿ ಬಳಸಲಾಗುವ ಶೇ.65 ರಷ್ಟು ಭಾಗಗಳನ್ನು ಕರ್ನಾಟಕದಲ್ಲಿ ತಯಾರಿಸಲಾಗುತ್ತದೆ. ಸಂಪೂರ್ಣ ವಾಣಿಜ್ಯ ವಿಮಾನ ತಯಾರಿಕಾ ಘಟಕ ಕರ್ನಾಟಕದಲ್ಲಿ ಸ್ಥಾಪನೆಯಾಗಬೇಕೆಂಬುದು ನನ್ನ ಆಸೆ. ಈ ಸಂಬಂಧ ನಾವು ಖಾಸಗಿ ವಿಮಾನ ತಯಾರಕರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಹೇಳಿದರು.

ಸಾಂಕ್ರಾಮಿಕ ರೋಗದ ಹೊರತಾಗಿಯೂ, ಕರ್ನಾಟಕಕ್ಕೆ ಹೂಡಿಕೆಗಳು ಹೆಚ್ಚಿವೆ, ಏಕೆಂದರೆ ಕರ್ನಾಟಕದಲ್ಲಿ ವ್ಯಾಪಾರ ಮಾಡುವುದು ಸುಲಭವಾಗಿರುವುದು ಹಾಗೂ ಕೈಗಾರಿಕಾ ಸ್ನೇಹಿ ರಾಜ್ಯವಾಗಿರುವುದಾಗಿದೆ. ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಉದ್ಯೋಗ ಸೃಷ್ಟಿಸುವ ಕಂಪನಿಗಳಿಗೆ ನಾವು ಪ್ರೋತ್ಸಾಹ ನೀಡುತ್ತೇವೆ.

ರಾಜ್ಯ ಸರ್ಕಾರವು ಏರೋಸ್ಪೇಸ್ ಕ್ಷೇತ್ರದಲ್ಲಿ 3,500 ಕೋಟಿ ರೂಪಾಯಿ ಮೌಲ್ಯದ ಒಪ್ಪಂದ ಪತ್ರಕ್ಕೆ ಸಹಿ ಹಾಕಿದೆ. ನಾವು ವಿಮಾನಗಳ ಬಿಡಿ ಭಾಗಗಳನ್ನು ತಯಾರಿಸುವುದಾದರೆ, ವಿಮಾನವನ್ನೂ ಕೂಡ ಸಿದ್ಧಪಡಿಸುವ ಸಾಮರ್ಥ್ಯ ಹೊಂದಿರುತ್ತೇವೆ. ಈಗಾಗಲೇ ಏರ್‌ಬಸ್ ಮತ್ತು ಬೋಯಿಂಗ್‌ನೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ವಿವರಿಸಿದರು.

ಕರಾವಳಿಯಲ್ಲಿ ಮರೀನಾ ಅಭಿವೃದ್ಧಿ ಕುರಿತು ಮಾತನಾಡಿ, ರಾಜ್ಯ ಸರ್ಕಾರ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ನಿಯಮಗಳನ್ನು ಸಡಿಲಿಸಿದೆ. "ಇದು ಕರಾವಳಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿರೀಕ್ಷೆಯನ್ನು ಹೊಂದಿದೆ. ಇದನ್ನು ಈ ವರ್ಷವೇ ಪೂರ್ಣಗೊಳಿಸಲು ಬಯಸಿದ್ದೇವೆ. ವಿವರವಾದ ಯೋಜನಾ ವರದಿ ಶೀಘ್ರದಲ್ಲಿಯೇ ಸಿದ್ಧವಾಗಲಿದೆ ಎಂದು ತಿಳಿಸಿದರು.

SCROLL FOR NEXT