ರಾಜ್ಯ

ಮಾರ್ಚ್ ಮೊದಲ ವಾರದಲ್ಲಿ ಬಿಬಿಎಂಪಿ ಬಜೆಟ್; ಆರೋಗ್ಯ, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ: ಬಿಬಿಎಂಪಿ ಆಯುಕ್ತ

Manjula VN

ಬೆಂಗಳೂರು: ನಗರದಲ್ಲಿ ಭೀಕರ ಪ್ರವಾಹ, ಹದಗೆಟ್ಟ ರಸ್ತೆಗಳು ಮತ್ತು ನಾಗರಿಕ ಸೌಕರ್ಯಗಳ ಬಗ್ಗೆ ದೂರುಗಳು, ಸಂಚಾರ ದಟ್ಟಣೆ ಸಮಸ್ಯೆ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಮಂಡಿಸಲು ಸಿದ್ಧತೆಗಳನ್ನು ನಡೆಸುತ್ತಿದೆ.

ವಿಧಾನಸಭಾ ಚನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿಯಾಗಿರುವ ಬೆಂಗಳೂರನಲ್ಲಿ ವಿಜಯ ಸಾಧಿಸುವುದು ಬಿಜೆಪಿಗೆ ಅತ್ಯಂತ ಮುಖ್ಯವಾಗಿದೆ. ಈಗಾಗಲೇ ಕೇಂದ್ರ ಮತ್ತು ರಾಜ್ಯ ಬಜೆಟ್‌ಗಳು ಮಂಡನೆಯಾಗಿದ್ದು, ಪ್ರಮುಖ ಘೋಷಣೆಗಳನ್ನು ಮಾಡಲಾಗಿದೆ. ಇದೀಗ ಬಿಬಿಎಂಪಿ ಬಜೆಟ್ ನಲ್ಲೂ ಹಲವಾರು ಯೋಜನೆಗಳನ್ನು ಘೋಷಣೆ ಮಾಡುವ ಮೂಲಕ ಬೆಂಗಳೂರಿಗರ ಮನಗೆಲ್ಲಲು ಸಿದ್ಥತೆಗಳ ಆರಂಭಿಸಿದೆ.

ಈ ಬಾರಿಯ ಬಿಬಿಎಂಪಿ ಬಜೆಟ್ ನಲ್ಲಿ ಶಿಕ್ಷಣ, ಆರೋಗ್ಯ ಮತ್ತು ಕಲ್ಯಾಣ ಕ್ರಮಗಳಿಗೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಲಾಗಿದ್ದು, ಈ ಮೂಲಕ ಆಸ್ತಿ ತೆರಿಗೆಯಲ್ಲಿ ಇಳಿಕೆ ಮಾಡಲು ಚಿಂತನೆ ನಡೆಸಿದೆ ಎಂದು  ಮೂಲಗಳು ತಿಳಿಸಿವೆ.

ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ ರಾಯಪುರ ಅವರು ಈ ಬಾರಿಯ ಬಜೆಟ್ ಮಂಡನೆ ಮಾಡಲಿದ್ದಾರೆ.

ಈಗಾಗಲೇ ಬಜೆಟ್ ಲೆಕ್ಕಾಚಾರ ಮುಗಿಸಿರುವ ಪಾಲಿಕೆ ಅಧಿಕಾರಿಗಳು, ಬಜೆಟ್ ಪಟ್ಟಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬುಧವಾರ ಸಲ್ಲಿಸಲಿದ್ದಾರೆ.

ಬಜೆಟ್ ಮಂಡನೆಗೆ ಅನುಮತಿ ಕೋರಿ ಬೊಮ್ಮಾಯಿ ಅವರಿಗೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಅಧಿಕೃತ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಆನ್‌ಲೈನ್‌ನಲ್ಲಿ ಸ್ಟ್ರೀಮ್ ಆಗುವುದರಿಂದ ಸಾರ್ವಜನಿಕರು ಬಜೆಟ್ ಮಂಡನೆಯನ್ನು ವೀಕ್ಷಿಸಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಳೆದ ವರ್ಷದ ಕೆಲ ಯೋಜನೆಗಳನ್ನು ಉಳಿಸಿಕೊಳ್ಳಲು ಬಿಬಿಎಂಪಿ ಚಿಂತನೆ ನಡೆಸಿದ್ದು, ಸಂಘಗಳಿಗೆ ನಿಗಮದಿಂದ ಮೀಸಲಿಟ್ಟ ಅನುದಾನ ಕುಗ್ಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಸರ್ಕಾರಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಬೀದಿ ದೀಪಗಳು, ರಸ್ತೆಗಳು ಮತ್ತು ಇತರ ನಾಗರಿಕ ಸೌಕರ್ಯಗಳಿಗೆ ಮೀಸಲಿಡುವುದರ ಜೊತೆಗೆ ಶಿಕ್ಷಣ, ಆರೋಗ್ಯ ಮತ್ತು ಕಲ್ಯಾಣ ಕ್ರಮಗಳ ಮೇಲೆ ಬಜೆಟ್ ಕೇಂದ್ರೀಕರಿಸುತ್ತದೆ ಎಂದು ಹೇಳಿದ್ದಾರೆ.

ಬಜೆಟ್ ಗಾತ್ರವು ಕಳೆದ ಆರ್ಥಿಕ ವರ್ಷದಲ್ಲಿ ಘೋಷಿಸಿದಂತೆಯೇ ಇರುತ್ತದೆ. ಬಿಬಿಎಂಪಿ ಈ ವರ್ಷ ರೂ.9,000 ಕೋಟಿ ಬಜೆಟ್ ಮಂಡಿಸುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.

ಕಸ ವಿಲೇವಾರಿಗೆ ರಾಜ್ಯ ಸರ್ಕಾರದಿಂದ ಅನುದಾನ ಬಾರದೇ ಇರುವುದರಿಂದ ಪ್ರಸಕ್ತ ವರ್ಷದ ಬಿಬಿಎಂಪಿ ಬಜೆಟ್'ನಲ್ಲಿ ಮಹತ್ವದ ಘೋಷಣೆಗಳಾಗುವ ಸಾಧ್ಯತೆಗಳಿವೆ. ಈ ವರ್ಷ ಕಸ ವಿಲೇವಾರಿಗೆ ಅತಿ ಹೆಚ್ಚು ಹಂಚಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ರಸ್ತೆ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ಕೆರೆಗಳು, ಕಾಲುವೆಗಳು, ಉದ್ಯಾನವನಗಳ ಉನ್ನತೀಕರಣಕ್ಕೆ ಬಿಬಿಎಂಪಿ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ವರದಿಗಳು ತಿಳಿಸಿವೆ.

SCROLL FOR NEXT