ರಾಜ್ಯ

ಪ್ರಧಾನಿ ಮೋದಿ ಉದ್ಘಾಟನೆಗೂ ಮುನ್ನ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಪರೀಕ್ಷಾರ್ಥ ಹಾರಾಟ

Manjula VN

ಶಿವಮೊಗ್ಗ: ಶಿವಮೊಗ್ಗದ ಸೋಗಾನೆ ಬಳಿ ನೂತನವಾಗಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಫೆಬ್ರವರಿ 27ರಂದು ಉದ್ಘಾಟಿಸಲಿದ್ದು, ಈ ನಡುವಲ್ಲೇ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಮೊದಲ ವಿಮಾನ ಪರೀಕ್ಷಾರ್ಥ ಹಾರಾಟ ನಡೆಸಿದ್ದು, ಯಶಸ್ವಿಯಾಗಿ ಲ್ಯಾಂಡಿಂಗ್ ಆಗಿದೆ.

ಭಾರತೀಯ ವಾಯುಪಡೆಯ ಪ್ರಾಯೋಗಿಕ ವಿಮಾನವು ಮಂಗಳವಾರ ವಿಮಾನ ನಿಲ್ದಾಣದಲ್ಲಿ ಪರೀಕ್ಷಾರ್ಥ ಹಾರಾಟ ನಡೆಸಿದ್ದು, ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ವಿಮಾನ ದೆಹಲಿಯಿಂದ ಹೊರಟಿದ್ದು, 2:30ಕ್ಕೆ ಶಿವಮೊಗ್ಗದಲ್ಲಿನ ನೂತನ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಪ್ರಾಯೋಗಿಕ ವಿಮಾನ ಬರುತ್ತಿಂದತೆಯೇ ಅಲ್ಲಿನ ಸುತ್ತಮುತ್ತಲಿನ ಪ್ರದೇಶದ ಜನರು ಕಿಕ್ಕಿರಿದು ಆಗಮಿಸಿದ್ದಾರೆ. ಹಾಗೆಯೇ ಅಲ್ಲಿನ ಭದ್ರತಾ ಸಿಬ್ಬಂದಿ ಮತ್ತು ಗ್ರಾಮದ ಜನರು ವಿಮಾನವನ್ನು ಕಂಡು ಸಂತೋಷ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಅವರು, ‘ಶಿವಮೊಗ್ಗದಲ್ಲಿ ಮೊದಲ ಪ್ರಾಯೋಗಿಕ ವಿಮಾನ ಬಂದಿಳಿದಿದ್ದು, ಫೆಬ್ರವರಿ 27ರಂದು ವಿಮಾನ ನಿಲ್ದಾಣವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಬನ್ನಿ, ನಾವೆಲ್ಲರೂ ಈ ಐತಿಹಾಸಿಕ ಕ್ಷಣದಲ್ಲಿ ಭಾಗಿಗಳಾಗೋಣ ಎಂದು ಹೇಳಿದ್ದಾರೆ.

ಶಿವಮೊಗ್ಗದ ಸುಸಜ್ಜಿತ ವಿಮಾನ ನಿಲ್ದಾಣವು 662.38 ಎಕರೆ ಭೂಮಿಯಲ್ಲಿ ನಿರ್ಮಾಣ ಗೊಂಡಿದ್ದು, ಇದಕ್ಕಾಗಿ ಜೂನ್ 2020 ರಲ್ಲಿ ಅಂದಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಅಡಿಪಾಯ ಹಾಕಿದ್ದರು.

SCROLL FOR NEXT