ರಾಜ್ಯ

ತುಮಕೂರು: ಸಾಲಬಾಧೆಗೆ ಪಿಡಬ್ಲ್ಯುಡಿ ಗುತ್ತಿಗೆದಾರ ಆತ್ಮಹತ್ಯೆಗೆ ಶರಣು

Manjula VN

ತುಮಕೂರು: ಸಾಲಬಾಧೆ ತಾಳಲಾರದೆ ತುಮಕೂರು ಸಮೀಪದ ದೇವರಾಯನದುರ್ಗ ಬೆಟ್ಟದ ಅತಿಥಿಗೃಹದಲ್ಲಿ ಪಿಡಬ್ಲ್ಯುಡಿ ಗುತ್ತಿಗೆದಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೃತ ವ್ಯಕ್ತಿಯನ್ನು ಸಪ್ತಗಿರಿ ಲೇಔಟ್ ನಿವಾಸಿ ಟಿ.ಎನ್.ಪ್ರಸಾದ್ (53) ಎಂದು ಗುರುತಿಸಲಾಗಿದೆ. ಶುಕ್ರವಾರ ಬೆಳಗ್ಗೆ ಪ್ರವಾಸೋದ್ಯಮ ಅತಿಥಿಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪ್ರಸಾದ್ ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಆತ್ಮಹತ್ಯೆಗೆ ಶರಣಾಗಿರುವ ಪ್ರಸಾದ್ ಅವರು, ಡೆತ್ ನೋಟ್ ಬರೆದಿಟ್ಟಿದ್ದು, ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಹೇಳಿಕೊಂಡಿದ್ದಾರೆ.

“ನನ್ನ ಸಾವಿಗೆ ಯಾರೂ ಕಾರಣರಲ್ಲ. ನನ್ನ ನಡಿಗೆಯ ಗೆಳೆಯನಿಗೆ ವಿದಾಯ" ಎಂದು ಡಿಸೆಂಬರ್ 29 ರಂದು ಎರಡು ಸಾಲಿನ ಡೆತ್ ನೋಟ್ ವೊಂದನ್ನು ಬರೆದಿಟ್ಟಿದ್ದಾರೆ.

ಮೃತ ಪ್ರಸಾದ್ ಅವರು, ಪಿಡಬ್ಲ್ಯುಡಿಯ ಹಲವು ಕಾಮಗಾರಿಗಳನ್ನು ಜಾರಿಗೆ ತಂದಿದ್ದರು, ರಾಧೇಶ್ಯಾಮ್ ಎಂದು ಗುರುತಿಸಲಾದ ಇನ್ನೊಬ್ಬ ವರ್ಗದ ಗುತ್ತಿಗೆದಾರರಿಂದ ಕಾಮಗಾರಿ ಕಾರ್ಯವನ್ನು ತೆಗೆದುಕೊಂಡಿದ್ದರು. ಸಾಲಬಾಧೆಯಿಂದಾಗಿ ಪ್ರಸಾದ್ ಇತ್ತೀಚೆಗಷ್ಟೇ ತಮ್ಮ ಮನೆಯನ್ನೂ ಮಾರಿದ್ದರು. ಈ ಬೆಳವಣಿಗೆಯು ಅವರು ಖಿನ್ನತೆಗೊಳಗಾಗುವಂತೆ ಮಾಡಿತ್ತು.  ಹಣ ಹಿಂದಿರುಗಿಸುವಂತೆ ಲೇವಾದೇವಿದಾರರೂ ಕೂಡ ಒತ್ತಡ ಹೇರಿದ್ದರು ಎಂದು ತಿಳಿದುಬಂದಿದೆ.

ಈ ಪ್ರಸಾದ್ ಅವರ ಸಾವು ಪ್ರಕರಣ ಸಂಬಂಧ ಅವರ ಕುಟುಂಬದವರು ಯಾವುದೇ ದೂರುಗಳನ್ನು ದಾಖಲಿಸಿಲ್ಲ. ಮೃತ ಪ್ರಸಾದ್ ರೂ.42 ಲಕ್ಷ ಸಾಲ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಈ ಸಂಬಂಧ ಕ್ಯಾತ್ಸಂದ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ನಡುವೆ ತುಮಕೂರು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎ.ಡಿ.ಬಲರಾಮಯ್ಯ ಅವರು, ‘ಪಿಡಬ್ಲ್ಯುಡಿ’ಯಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆಯುತ್ತಿದ್ದು, ಬಿಲ್‌ಗಳನ್ನು ತೆರವುಗೊಳಿಸಲು ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

SCROLL FOR NEXT