ರಾಜ್ಯ

ಸಿದ್ದೇಶ್ವರ ಶ್ರೀಗಳ ಆರೋಗ್ಯ ಸ್ಥಿರ, ಚಿಕಿತ್ಸೆ ಮುಂದುವರಿಕೆ; ಆಶ್ರಮದತ್ತ ಸಾವಿರಾರು ಅಭಿಮಾನಿಗಳ ಆಗಮನ, ಭದ್ರತೆ ಹೆಚ್ಚಳ

Manjula VN

ವಿಜಯಪುರ: ಸಿದ್ದೇಶ್ವರ ಶ್ರೀಗಳ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದುಬಂದಿದೆ. ಈ ಮಧ್ಯೆ ಅಪಾರ ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಆಶ್ರಮದತ್ತ ದೌಡಾಯಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಅಶ್ರಮದಲ್ಲಿ ಅನ್ನದಾಸೋಹಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.

ಶ್ರೀಗಳ ಆರೋಗ್ಯ ಕುರಿತು ಹೇಳಿಕೆ ನೀಡಿರುವ ಮಾಜಿ ಸಚಿವ ಎಂ.ಬಿ.ಪಾಟೀಲ ಅವರು, ಸಿದ್ದೇಶ್ವರ ಶ್ರೀಗಳ ಆರೋಗ್ಯ ಸ್ಥಿರವಾಗಿದೆ. ಯಾರೂ ಆತಂಕ ಪಡುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.

ಈ ನಡುವೆ ಆಶ್ರಮಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಭೇಟಿ ನೀಡಿದ್ದು, ಶ್ರೀಗಳ ಆರೋಗ್ಯವನ್ನು ವಿಚಾರಿಸಿದರು.

ಇದಕ್ಕೂ ಮುನ್ನ ಎಂ.ಬಿ.ಪಾಟೀಲ, ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ನಿಜಗುಣಾನಂದ ಸ್ವಾಮೀಜಿ, ಸಿಂದನೂರಿನ ಮಾಜಿ ಶಾಸಕ ಹಂಪನ ಗೌಡ ಮತ್ತು ಬಾದರ್ಲಿ ಶ್ರೀಗಳು ದರ್ಶನಕ್ಕೆ ತೆರಳಿ ಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ.

ಸಿದ್ದೇಶ್ವರ ಶ್ರೀಗಳ ಆರೋಗ್ಯದ ಬಗ್ಗೆ ಆತಂಕಗೊಂಡಿರುವ ಸಾವಿರಾರು ಭಕ್ತರು, ಅಭಿಮಾನಿಗಳು ಜ್ಞಾನಯೋಗಾಶ್ರಮದತ್ತ ಧಾವಿಸುತ್ತಿದ್ದಾರೆ. ಈಗಾಗಲೇ ಸಾವಿರಕ್ಕೂ ಹೆಚ್ಚು ಮಂದಿ ಆಶ್ರಮದ ಆವರಣದಲ್ಲಿಯೇ ತಂಗಿದ್ದಾರೆ. ಅನ್ಯರಾಜ್ಯದಿಂದಲೂ ಜನರು ಬರುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಆಶ್ರಮದ ಆಡಳಿತ ಮಂಡಳಿ ಅನ್ನದಾಸೋಹಕ್ಕೆ ವ್ಯವಸ್ಥೆ ಮಾಡಿಕೊಳ್ಳುತ್ತಿದೆ. ಅನೇಕ ಭಕ್ತಾದಿಗಳು ಶ್ರೀಗಳು ಬೇಗ ಗುಣಮುಖರಾಗಲೆಂದು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಹೆಚ್ಚೆಚ್ಚು ಜನರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಆಶ್ರಮದ ಸುತ್ತಮುತ್ತ ಪೊಲೀಸ್ ಇಲಾಖೆ ವಿಶೇಷ ಭದ್ರತೆ ಕೈಗೊಳ್ಳಲಾಗಿದೆ.

ಗದಗ, ಬಾಗಲಕೋಟೆ ಜಿಲ್ಲೆಯಿಂದ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಡಿಎಸ್ಪಿ-5, ಸಿಪಿಐ-20, ಪಿಎಸ್ಐ-50, ಎಎಸ್ಐ -100, ಸಿಎಚ್​ಸಿ-ಸಿಪಿಸಿ 1,000 ಸಿಬ್ಬಂದಿ ಇದ್ದಾರೆ.

SCROLL FOR NEXT