ರಾಜ್ಯ

ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣ: ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಬಂಧನಕ್ಕೆ ಸಿದ್ದರಾಮಯ್ಯ ಒತ್ತಾಯ

Nagaraja AB

ಬೆಂಗಳೂರು: ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಸಹಿತ ಇತರ ಎಲ್ಲಾ ಆರೋಪಿಗಳನ್ನು ಈ ಕೂಡಲೇ ಬಂಧಿಸಿ, ನಿಷ್ಪಕ್ಷಪಾತ ತನಿಖೆ ನಡೆಸಲು ಪೊಲೀಸ್ ಇಲಾಖೆಗೆ ಆದೇಶ ನೀಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದ್ದಾರೆ. 

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಉದ್ಯಮವೊಂದಕ್ಕೆ ಸುಮಾರು 1.5 ಕೋಟಿ ರೂಪಾಯಿ ಬಂಡವಾಳ ಹೂಡಿದ್ದ ಪ್ರದೀಪ್ ಗೆ ನಯಾಪೈಸೆ ಲಾಭದ ಹಣ ಕೈಸೇರಿಲ್ಲ. ಈ ವಿವಾದದಲ್ಲಿ ಶಾಸಕ ಅರವಿಂದ ಲಿಂಬಾವಳಿ ಮಧ್ಯಸ್ಥಿಕೆ ವಹಿಸಿದ್ದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಪತಿಯ ಸಾವಿಗೆ ನ್ಯಾಯ ಸಿಗಬೇಕು ಮತ್ತು ಸಾಲಮಾಡಿ ಹೂಡಿಕೆ ಮಾಡಿದ್ದ ಹಣ ವಾಪಸು ಕೊಡಿಸಬೇಕು ಎಂಬುದು ಮೃತ ಪ್ರದೀಪ್ ಪತ್ನಿ ನಮಿತಾ ಅವರ ಮನವಿ. ಪೊಲೀಸ್ ಇಲಾಖೆ ತಕ್ಷಣ ಕ್ರಮವಹಿಸಿ, ಈ ಹಣವನ್ನು ವಾಪಾಸು ಕೊಡಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಡೆತ್ ನೋಟ್ ನಲ್ಲಿ ಅರವಿಂದ ಲಿಂಬಾವಳಿ ಹೆಸರಿದೆ ಎಂಬ ಕಾರಣಕ್ಕೆ ಪೊಲೀಸರು ಅಪರಾಧಿಗಳನ್ನು ಬಂಧಿಸದಿದ್ದರೆ ಸಾಕ್ಷ್ಯನಾಶ ಮಾಡುವ ಸಾಧ್ಯತೆಗಳಿರುತ್ತದೆ. ಹೀಗಾದಾಗ ಅನ್ಯಾಯಕ್ಕೊಳಗಾದ ಕುಟುಂಬಕ್ಕೆ ನ್ಯಾಯ ಸಿಗಲು ಸಾಧ್ಯವೇ?ಪೊಲೀಸರು ಮಧ್ಯರಾತ್ರಿಯಲ್ಲಿ ಮೃತನ ಮೊಬೈಲ್ ಕೊಡಿ ಎಂದು ಕುಟುಂಬದವರ ಬಳಿ ಕೇಳಿದ್ದಾರೆ. ಸಾವಿಗೂ ಮುನ್ನ ಪ್ರದೀಪ್ ಅವರು ಬರೆದ ಡೆತ್ ನೋಟ್ ನಲ್ಲಿ ಸಾವಿಗೆ ಕಾರಣರಾದವರ ಹೆಸರು ಸ್ಪಷ್ಟವಾಗಿರುವಾಗ ತನಿಖೆಯನ್ನು ಬೇರೆ ಆಯಾಮಗಳಿಗೆ ತಿರುಗಿಸುವ ಅಗತ್ಯವೇನಿದೆ ಎಂದು ಪ್ರಶ್ನಿಸಿದ್ದಾರೆ. 

ಈ ಹಿಂದೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಾಗ ಸೂಕ್ತ ತನಿಖೆ ನಡೆಸದೆ ಪ್ರಕರಣವನ್ನು ಮುಚ್ಚಿ ಹಾಕಲಾಗಿದೆ. ಈ ಪ್ರಕರಣವು ಅದೇ ರೀತಿ ಆಗುವುದು ಬೇಡ. ತನಿಖೆಯಲ್ಲಿ ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡಬಾರದು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. 

SCROLL FOR NEXT