ರಾಜ್ಯ

ಬಜರಂಗದಳದ ಕಾರ್ಯಕರ್ತನ ಮೇಲೆ ಮಾರಕಾಸ್ತ್ರಗಳಿಂದ ದಾಳಿಗೆ ಯತ್ನ: ಇಂದು ಸಾಗರ  ಬಂದ್

Manjula VN

ಸಾಗರ: ಬಜರಂಗದಳ ಸಂಘಟನೆಯ ಸಹ ಸಂಚಾಲಕ ಸುನಿಲ್ ಎಂಬುವವರ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿಗೆ ಯತ್ನಿಸಿದ್ದು, ಕೂದಲೆಳೆ ಅಂತರದಲ್ಲಿ ಸುನಿಲ್ ಅವರು ಪ್ರಾಣಾಪಾಯದಿಂದ ಪಾರಾಗಿರುವಘಟನೆ ಸೋಮವಾರ ಸಾಗರ ಪಟ್ಟಣದ ಬಿ.ಹೆಚ್.ರಸ್ತೆಯಲ್ಲಿ ನಡೆದಿದ್ದು, ಇದರ ಬೆನ್ನಲ್ಲೇ ಘಟನೆಯಿಂದ ಆಕ್ರೋಶಗೊಂಡಿರುವ ಹಿಂದೂಪರ ಸಂಘಟನೆಗಳು ಮಂಗಳವಾರ ಸಾಗರ ಬಂದ್'ಗೆ ಕರೆ ನೀಡಿವೆ.

ಸಾಗರದ ನೆಹರು ನಗರ ನಿವಾಸಿ ಸುನೀಲ್ ಜಿಯೋ ಫೈಬರ್ ಕಚೇರಿಯ ಬಳಿ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲು ಯತ್ನ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ದುಷ್ಕರ್ಮಿಗಳ ಈ ಕೃತ್ಯದ ದೃಷ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಘಟನೆಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಮುಖಂಡರು, ಕಾರ್ಯಕರ್ತರು ಸಾಗರ ಟೌನ್ ಪೊಲೀಸ್ ಠಾಣೆ ಎಂದುರು ಪ್ರತಿಭಟನೆ ನಡೆಸಿ ಮಂಗಳವಾರ ಸ್ವಯಂ ಘೋಷಿತ ಬಂದ್'ಗೆ ಕರೆ ನೀಡಿದ್ದಾರೆ.

ಘಟನೆ ಸಂಬಂಧ ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಜಿಕೆ ಸುದ್ದಿಗಾರರೊಂದಿಗೆ ಮಾತನಾಡಿ, ಸಮೀರ್ ಎಂಬಾತ ಸಾಗರದ ಜ್ಯುವೆಲ್ಲರಿ ಶೋರೂಂ ಎದುರು ದ್ವಿಚಕ್ರ ವಾಹನದಲ್ಲಿ ಬಂದಿದ್ದ ಭಜರಂಗದಳದ ಕಾರ್ಯಕರ್ತ ಸುನಿಲ್ ಎಂಬಾತನ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಸಮೀರ್ ತನ್ನ ಮೋಟಾರ್ ಸೈಕಲ್ ನಲ್ಲಿದ್ದ ಉದ್ದನೆಯ ಆಯುಧವನ್ನು ತೆಗೆದುಕೊಂಡು ಸುನೀಲ್ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ.

“ಆರೋಪಿಗಳನ್ನು ಪತ್ತೆಹಚ್ಚಲು ಮತ್ತು ದಾಳಿಯ ಕಾರಣವನ್ನು ಕಂಡುಹಿಡಿಯಲು ನಾವು ಮೂರು ತಂಡಗಳನ್ನು ರಚಿಸಿದ್ದೇವೆ. ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇದೇ ವೇಳೆ ಸಾಗರದ ಬಿಜೆಪಿ ಶಾಸಕ ಹರತಾಳು ಹಾಲಪ್ಪ ಸುನೀಲ್ ಮನೆಗೆ ಭೇಟಿ ನೀಡಿದರು. ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಕಾಂಗ್ರೆಸ್ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಕೂಡ ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಸಾಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

SCROLL FOR NEXT