ರಾಜ್ಯ

ಮಹದಾಯಿ ವಿವಾದ: ಕಳಸಾ-ಬಂಡೂರಿ ಅಣೆಕಟ್ಟು ನಿರ್ಮಾಣ ಸ್ಥಗಿತಕ್ಕೆ ರಾಜ್ಯಕ್ಕೆ ಗೋವಾ ಸರ್ಕಾರ ನೋಟಿಸ್

Manjula VN

ಬೆಳಗಾವಿ: ಕೇಂದ್ರ ಸರ್ಕಾರವು ಪರಿಷ್ಕೃತ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್) ಅನುಮೋದನೆ ನೀಡಿದ ಬಳಿಕ ಕಳಸಾ-ಬಂಡೂರಿ ಯೋಜನೆ ಜಾರಿಗೆ ರಾಜ್ಯ ಸರ್ಕಾರವು ಮುಂದಾಗಿದ್ದು, ಇದಕ್ಕೆ ಗೋವಾ ಸರ್ಕಾರ ಅಡ್ಡಿಯುಂಟು ಮಾಡಿದೆ.

ಕೂಡಲೇ ಕಾಮಗಾರಿ ಸ್ಥಗಿತಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಗೋವಾದ ಮುಖ್ಯ ವನ್ಯಜೀವಿ ವಾರ್ಡನ್ ನೋಟಿಸ್ ಜಾರಿಗೊಳಿಸಿದ್ದಾರೆಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.

ಯೋಜನಾ ಸ್ಥಳವು ಮಹದಾಯಿ ವನ್ಯಜೀವಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಬರುವುದರಿಂದ ಕರ್ನಾಟಕ ಸರ್ಕಾರಕ್ಕೆ ಗೋವಾದ ಮುಖ್ಯ ವನ್ಯಜೀವಿ ವಾರ್ಡನ್ ನೋಟಿಸ್ ಜಾರಿ ಮಾಡಿದ್ದು, ನೋಟಿಸ್‌ಗೆ ಪ್ರತಿಕ್ರಿಯೆ ನೀಡದಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆಂದು ತಿಳಿಸಿದ್ದಾರೆ.

ನಿನ್ನೆಯಷ್ಟೇ ಪರಿಸರ ಮತ್ತು ಅರಣ್ಯ ಸಚಿವಾಲಯದ (ಎಂಒಇಎಫ್) ತಂಡವು ಯೋಜನೆ ಅನುಷ್ಠಾನಗೊಳ್ಳುವ ಅರಣ್ಯ ಭೂಮಿಯನ್ನು ಪರಿಶೀಲನೆ ನಡೆಸಿತು.

ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಹಲವು ಉನ್ನತ ಅರಣ್ಯ ಇಲಾಖೆ ಅಧಿಕಾರಿಗಳು ತಂಡಕ್ಕೆ ಮಾಹಿತಿ ನೀಡಿದರು.

ಈ ತಂಡ ಬುಧವಾರ ಅಥಣಿ ಸಮೀಪದ ತೆಲಸಂಗಕ್ಕೆ ಭೇಟಿ ನೀಡಿ, ಅರಣ್ಯ ಇಲಾಖೆಗೆ ರಾಜ್ಯ ಸರ್ಕಾರ ಮಂಜೂರು ಮಾಡುತ್ತಿರುವ ಅರಣ್ಯ ಭೂಮಿಗೆ ಬದಲಿಯಾಗಿ ನೀಡುತ್ತಿರುವ ವಿಶಾಲವಾದ ಭೂಮಿಯನ್ನು ಪರಿಶೀಲಿಸಲಿದೆ ಎಂದು ಉನ್ನತ ಅರಣ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪರಿಷ್ಕೃತ ಡಿಪಿಆರ್‌ನಲ್ಲಿ ಯೋಜನೆಯಡಿಯಲ್ಲಿ ಬಳಸಬೇಕಾದ ಅರಣ್ಯ ಭೂಮಿಯನ್ನು ಕಡಿಮೆಗೊಳಿಸಿರುವುದರಿಂದ ಕರ್ನಾಟಕಕ್ಕೆ ಅರಣ್ಯ ಮತ್ತು ಪರಿಸರ ಅನುಮತಿಗಳನ್ನು ಎಂಒಇಎಫ್ ನೀಡುವುದು ಅಗತ್ಯವಿದೆ ಎಂದು ಮೂಲಗಳು ತಿಳಿಸಿವೆ.

ಪರಿಷ್ಕೃತ ಡಿಪಿಆರ್ ಪ್ರಕಾರ, ಕಳಸಾ ಯೋಜನೆಯಡಿ ಬರುವ ಅರಣ್ಯ ಭೂಮಿ 166 ಹೆಕ್ಟೇರ್‌ನಿಂದ 37 ಹೆಕ್ಟೇರ್‌ಗೆ ಇಳಿದಿದ್ದು, ಬಂಡೂರಿ ಯೋಜನೆಗಾಗಿ 183 ಹೆಕ್ಟೇರ್‌ನಿಂದ 24 ಹೆಕ್ಟೇರ್‌ಗೆ ಇಳಿಕೆಯಾಗಿರುವುದಾಗಿ ತಿಳಿದುಬಂದಿದೆ.

ಅರಣ್ಯ ಮತ್ತು ವನ್ಯಜೀವಿಗಳಿಗೆ ಹಾನಿಯಾಗುವುದನ್ನು ತಪ್ಪಿಸಲು ಎಂಒಇಎಫ್ ತಂಡವು ಹಲವಾರು ಕ್ರಮಗಳನ್ನು ಸೂಚಿಸಿದೆ ಮತ್ತು ಭೂಗತ ವಿದ್ಯುತ್ ಕೇಬಲ್‌ಗಳನ್ನು ಹಾಕುವ ಮೂಲಕ ಸಾವಿರಾರು ಮರಗಳನ್ನು ಕಡಿಯುವುದನ್ನು ಇದರಿಂದ ತಪ್ಪಿಸಲು ಸಾಧ್ಯವಿದೆ ಅಧಿಕಾರಿಗಳು ಸೂಚಿಸಿದ್ದಾರೆ.

SCROLL FOR NEXT