ರಾಜ್ಯ

ಗ್ರಾಮೀಣ ಪ್ರದೇಶದಲ್ಲಿ ವಿವೇಕಾನಂದರ ಯೋಜನೆ ಜಾರಿಗೆ ಕ್ರಮ: ಸಚಿವ ಗೋಪಾಲಯ್ಯ

Nagaraja AB

ಬೆಂಗಳೂರು: ವಿವೇಕಾನಂದರ ಯೋಜನೆಗಳನ್ನು ಗ್ರಾಮೀಣ ಪ್ರದೇಶದಲ್ಲಿ ಜಾರಿಗೊಳಿಸುವುದು ರಾಜ್ಯ ಸರ್ಕಾರದ ಉದ್ದೇಶವಾಗಿದೆ ಎಂದು ಅಬಕಾರಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ.

ಮಹಾಲಕ್ಷ್ಮಿ ಲೇಔಟ್ ನಲ್ಲಿ ಸ್ವಾಮಿ ವಿವೇಕಾನಂದರ ಜಯಂತಿಯ ಪ್ರಯುಕ್ತ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಪ್ರತಿ ಪಂಚಾಯಿತಿಯಿಂದ ಎರಡು ಸಂಘದಂತೆ, 16,000 ಯುವ ಸಂಘಗಳಿಗೆ, ಸರ್ಕಾರದಿಂದ ರೂ. 1 ಲಕ್ಷ  ಹಾಗೂ ಬ್ಯಾಂಕ್ ಗಳಿಂದ ರೂ. 5 ಲಕ್ಷ ನೀಡಿ ವಿವೇಕಾನಂದ ಯೋಜನೆ ಜಾರಿ ಮಾಡಲಾಗುತ್ತಿದೆ ಎಂದರು. 

ಸ್ವಾಮಿ ವಿವೇಕಾನಂದರ ಯೋಜನೆಗಳನ್ನು ಗ್ರಾಮೀಣ ಪ್ರದೇಶದಲ್ಲಿ ಅನುಷ್ಠಾನಕ್ಕೆ ತರಬೇಕು ಎಂಬ ದೃಷ್ಟಿಯಿಂದ ಗ್ರಾಮೀಣ ಪ್ರದೇಶದ 18 ವರ್ಷ ದಿಂದ 30 ವರ್ಷ ಇರುವಂತಹ ಯುವಕರ ತಂಡಗಳಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿ ಆ ಗ್ರಾಮಗಳನ್ನು ಮಾದರಿ ಗ್ರಾಮವಾಗಿ ಮಾಡಲಾಗುವುದು ಎಂದು ತಿಳಿಸಿದರು. 

ಮಕ್ಕಳಿಗೆ ಸ್ವಾಮಿ ವಿವೇಕಾನಂದರ ಚಿಂತನೆಗಳು ಹಾಗೂ ವಿಚಾರಧಾರೆಗಳನ್ನು ತಿಳಿಸುವಂತಹ ಕೆಲಸವನ್ನು ಮಾಡೋಣ. ಪ್ರತಿ ದಿನ ವಿವೇಕಾನಂದರ ಕುರಿತು ಪುಸ್ತಕಗಳನ್ನು ಓದಲು ಮಕ್ಕಳಿಗೆ ತಿಳಿಸಬೇಕು. ಅವರು ದೇಶಕ್ಕಾಗಿ ಕೊಟ್ಟಿರುವಂತಹ ಕೊಡುಗೆಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ ಎಂದು ಹೇಳಿದರು.

SCROLL FOR NEXT