ರಾಜ್ಯ

ಕೊಡಗಿನ ದುಬಾರೆ ಆನೆ ಶಿಬಿರಕ್ಕೆ ಕಾಡಾನೆ ದಾಂಗುಡಿ; ಪಳಗಿದ ಆನೆಗೆ ಗಾಯ 

Srinivas Rao BV

ಕೊಡಗು: ಕೊಡಗಿನ ದುಬಾರೆ ಆನೆ ಶಿಬಿರಕ್ಕೆ ಕಾಡಾನೆಯೊಂದು ನುಗ್ಗಿದ್ದು ಪಳಗಿದ ಆನೆಯನ್ನು ಘಾಸಿಗೊಳಿಸಿದೆ.
 
ಈ ಘಟನೆಯ ಬೆನ್ನಲ್ಲೇ ಮುನ್ನೆಚ್ಚರಿಕಾ ಕ್ರಮವಾಗಿ ದುಬಾರೆ ಆನೆ ಶಿಬಿರಕ್ಕೆ ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.  ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಯನ್ನು ವಾಪಸ್ ಕಾಡಿಗೆ ಕಳಿಸುವ ಕಾರ್ಯಾಚರಣೆಯಲ್ಲಿ ಮಗ್ನರಾಗಿದ್ದಾರೆ. 

ಕಳೆದ ದಶಕಕ್ಕೆ ಹೋಲಿಕೆ ಮಾಡಿದರೆ ಕೊಡಗಿನಾದ್ಯಂತ ಕಾಡಾನೆಯ ಉಪಟಳ ದುಪ್ಪಟ್ಟುಗೊಂಡಿದ್ದು, ಇತ್ತೀಚೆಗೆ ಕಾಡಾನೆಗಳು ಕೃಷಿ ಭೂಮಿಗೆ ನುಗ್ಗಿ ಬೆಳೆ ಹಾನಿ ಮಾಡಿರುವುದಷ್ಟೇ ಅಲ್ಲದೇ ಜಿಲ್ಲೆಯಲ್ಲಿ ಆಸ್ತಿಗಳನ್ನು ನಾಶ ಮಾಡಿರುವ ಎರಡು ಘಟನೆಗಳು ವರದಿಯಾಗಿತ್ತು. ಕೊಡಗಿನಲ್ಲಿ ಇತ್ತೀಚೆಗೆ ಮಾನವ ಹಾಗೂ ಕಾಡಾನೆಗಳ ನಡುವಿನ ಸಂಘರ್ಷ ಹೆಚ್ಚುತ್ತಿದೆ.

ಬುಧವಾರದಂದು ಮಧ್ಯರಾತ್ರಿ ದುಬಾರೆ ಶಿಬಿರಕ್ಕೆ ಕಾಡಾನೆ ದಾಳಿ ಮಾಡಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಗೋಪಿ ಎಂಬ ಪಳಗಿದ ಆನೆಗೆ ಗಾಯಗಳಾಗಿದ್ದು, ಘೀಳಿಟ್ಟಿದೆ ತಕ್ಷಣವೇ ಮಾವುತರು ಸ್ಥಳಕ್ಕೆ ಆಗಮಿಸಿದ್ದಾರೆ. ಅರಣ್ಯದಲ್ಲಿ ವಾಸಿಸುವ ಮಂದಿ ಸಿಡಿ ಮದ್ದುಗಳನ್ನು ಸಿಡಿಸಿ ಆನೆಯನ್ನು ವಾಪಸ್ ಕಾಡಿಗೆ ಅಟ್ಟಲು ಯತ್ನಿಸಿದರು ಆದರೆ ಅದು ಫಲಕಾರಿಯಾಗಲಿಲ್ಲ. 

ಈ ಸಲಗಕ್ಕೆ ಮತ್ತೊಂದು ಕಾಡಾನೆ ಹಾಗೂ ಇನ್ನು ಎರಡು ಆನೆಗಳು ದುಬಾರೆ ಶಿಬಿರದ ಸುತ್ತಮುತ್ತಲ ಪ್ರದೇಶಗಳಲ್ಲಿ ಅಡ್ಡಾಡುತ್ತಿರುವುದು ಕಂಡುಬಂದಿದ್ದು, ಕಾಡಾನೆಗಳನ್ನು ವಾಪಸ್ ಕಾಡಿಗೆ ಕಳಿಸುವ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಗಾಯಗೊಂಡಿರುವ ಆನೆ ಗೋಪಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.

SCROLL FOR NEXT