ರಾಜ್ಯ

ಕಾರು ಚಾಲಕನ ಹತ್ಯೆ ಆರೋಪ: ಸಿಬಿಐ ತನಿಖೆಗೆ ಆಗ್ರಹಿಸಿ ಸಿಎಂ ಬೊಮ್ಮಾಯಿಗೆ ಯತ್ನಾಳ್ ಪತ್ರ

Nagaraja AB

ವಿಜಯಪುರ: ಸಚಿವ ಮುರುಗೇಶ್ ನಿರಾಣಿ ಹಾಗೂ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ನಡುವಿನ ಟಾಕ್ ವಾರ್ ಮುಂದುವರೆದಿದ್ದು,  ಕಾರು ಚಾಲಕನ ಹತ್ಯೆ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಸಚಿವ ಮುರುಗೇಶ್‌ ನಿರಾಣಿ  ನಿನ್ನೆ ವಿಜಯಪುರದ ಕಾರು ಚಾಲಕನ ಹತ್ಯೆಯಾಗಿತ್ತು. ಆತ ಯಾರು? ಏನು? ಹತ್ಯೆಯ ಬಗ್ಗೆ ಮಾಧ್ಯಮಗಳು ತನಿಖೆ ನಡೆಸಲಿ ಎಂದು ಯತ್ನಾಳ್ ವಿರುದ್ಧ ಪರೋಕ್ಷವಾಗಿ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್ ಅವರು ಮುಖ್ಯಮಂತ್ರಿಗೆ ಪತ್ರ ಬರೆದು, ಆರೋಪದ  ಬಗ್ಗೆ ಸಿಬಿಐ ತನಿಖೆಗೆ ವಹಿಸುವಂತೆ ಸವಾಲು ಎಸೆದಿದ್ದಾರೆ. 

ವಿಜಯಪುರದ ಯಾರೋ ಒಬ್ಬ ಕಾರು ಚಾಲಕನ ಕೊಲೆ ಬಗ್ಗೆ ಕ್ಯಾಬಿನೆಟ್ ದರ್ಜೆಯ ಸಚಿವರೊಬ್ಬರು ಮಾಧ್ಯಮದ ಮುಂದೆ ಗಂಭೀರ ಆರೋಪದ ಹೇಳಿಕೆ ನೀಡಿದ್ದು, ಜನತೆಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ದೇಶದ ಜನತೆಗೆ ಎಲ್ಲ ಸತ್ಯಾಸತ್ಯತೆ ಗೊತ್ತಾಗಬೇಕು. ತಕ್ಷಣ 24 ಗಂಟೆಯಲ್ಲಿಯೇ ಈ ಪ್ರಕರಣ ಕುರಿತು ಸಿಬಿಐ ತನಿಖೆಗೆ ಒಳಪಡಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆಂದು ಯತ್ನಾಳ್ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಸಿಎಂ ಬೊಮ್ಮಾಯಿಗೆ ಯತ್ನಾಳ್ ಬರೆದಿರುವ ಪತ್ರ

ಸುಳ್ಳು ಆರೋಪ ಮಾಡಿ, ಜನತೆಗೆ ತಪ್ಪು ಸಂದೇಶ ನೀಡುವ ತಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು, ಇಲ್ಲವಾದಲ್ಲಿ ಸುಳ್ಳು ಆರೋಪ ಮಾಡಿದ ಸಚಿವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. 

ಈ ಮಧ್ಯೆ ಯತ್ನಾಳರ ಕಾರು ಚಾಲಕನ ಕೊಲೆ ವಿಚಾರ ಬಿಜೆಪಿ ನಾಯಕರಿಗೆ ತಿಳಿದಿದ್ದರೂ ಇಷ್ಟು ದಿನ ಮುಚ್ಚಿಟ್ಟಿದ್ದೇಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

SCROLL FOR NEXT