ರಾಜ್ಯ

ಬೆಳಗಾವಿ: ಆಟದ ಮೈದಾನ ಅಭಿವೃದ್ಧಿಗೆ 44 ಎಕರೆ ಭೂಮಿಗೆ ಜಿಲ್ಲಾಧಿಕಾರಿ ಆದೇಶ: ಗ್ರಾಮಸ್ಥರು ವಿರೋಧ

Manjula VN

ಬೆಳಗಾವಿ: ಬೆಳಗಾವಿಯ ಯಳ್ಳೂರು ಗ್ರಾಮ ಮತ್ತೆ ಸುದ್ದಿಯಲ್ಲಿದೆ. ಕ್ರೀಡಾ ಮೈದಾನದ ಅಭಿವೃದ್ಧಿಗಾಗಿ 44 ಎಕರೆ ಭೂಮಿಯನ್ನು ಜಿಲ್ಲಾ ಪಂಚಾಯತ್'ಗೆ ನೀಡುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದು, ಈ ಆದೇಶಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಆಟದ ಮೈದಾನ ಅಭಿವೃದ್ಧಿಗೆ ಆದೇಶ ಹೊರಡಿಸಿದ್ದ ಜಿಲ್ಲಾಧಿಕಾರಿಗಳು ಈ ಕುರಿತು ಭೂಮಿ ಪರಿಶೀಲನೆಗೆ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದರು, ಇದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ಎಳ್ಳೂರು ಜಿಲ್ಲಾ ಪಂಚಾಯತ್ ಸದಸ್ಯರು ಸಭೆ ನಡೆಸಿ, ಭೂಮಿಯನ್ನು ದನಗಳನ್ನು ಮೇಯಿಸಲು ಬಳಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶ ವಿರೋಧಿಸಲು ನಿರ್ಣಯವನ್ನು  ಅಂಗೀಕರಿಸಿದ್ದಾರೆಂದು ತಿಳಿದುಬಂದಿದೆ.

ಈ ಭೂಮಿಯ ಮೇಲೆ ಹಲವು ರೈತರು ಅವಲಂಬಿತರಾಗಿದ್ದಾರೆ. ಇಲ್ಲಿ ಶಾಲೆ, ದೇವಾಲಯ, ಕಸದ ಗೋದಾಮು ಹಾಗೂ ಕೆಲ ಮನೆಗಳೂ ಇವೆ. ಇದೀಗ ಜಿಲ್ಲಾಧಿಕಾರಿಗಳು ಈ ಎಲ್ಲಾ ಕಟ್ಟಡಗಳನ್ನೂ ತೆರವು ಮಾಡುವಂತೆ ಆದೇಶ ಹೊರಡಿಸಿದ್ದಾರೆಂದು ಯಳ್ಳೂರು ಜಿಲ್ಲಾ ಪಂಚಾಯತ್'ನ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

66 ಎಕರೆ 17 ಗುಂಟಾದಲ್ಲಿ ಜಾನುವಾರುಗಳ ಮೇಯಿಸಲು 44 ಎಕರೆ ಭೂಮಿಯನ್ನು ಮೀಸಲಿಡಲಾಗಿದೆ. ಆ ಭೂಮಿಯನ್ನು ನೀಡುವಂತೆ ಜಿಲ್ಲಾಧಿಕಾರಿಗಳು ಹೇಳುತ್ತಿದ್ದಾರೆ. ಈ ಭೂಮಿಯನ್ನು ವಶಪಡಿಸಿಕೊಂಡಿದ್ದೇ ಆದರೆ, ಉಳಿದ 22 ಎಕರೆ 17 ಗುಂಟಾದಲ್ಲಿ ದನ ಮೇಯಿಸಲು ಸಾಕಾಗುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಈ ಸಂಬಂಧ ಕಾನೂನು ರೀತಿಯಲ್ಲಿ ಹೋರಾಟ ಮಾಡಲು ನಿರ್ಧರಿಸುವುದಾಗಿ ತಿಳಿಸಿದ್ದಾರೆ.

SCROLL FOR NEXT