ರಾಜ್ಯ

ಬೆಂಗಳೂರು: 2 ದರೋಡೆ ಪ್ರಕರಣಗಳನ್ನು ಭೇದಿಸಿದ ಪೊಲೀಸರು; ಒಂದು ನಕಲಿ, ಇನ್ನೊಂದು ಅಸಲಿ

Ramyashree GN

ಬೆಂಗಳೂರು: ಪಶ್ಚಿಮ ವಿಭಾಗದ ಪೊಲೀಸರು ಎರಡು ದರೋಡೆ ಪ್ರಕರಣಗಳನ್ನು ಭೇದಿಸಿದ್ದು, 72 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ. ಮೂವರು ವೃತ್ತಿಪರ ದರೋಡೆಕೋರರು ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಎರಡು ಪ್ರಕರಣಗಳಲ್ಲಿ ಒಂದು ಸುಳ್ಳಾಗಿದ್ದು, ದೂರುದಾರರಾದ ಸಗಟು ಶೂ ವ್ಯಾಪಾರಿಯೊಬ್ಬರು ದರೋಡೆ ಘಟನೆಯನ್ನು ನೆಪವಾಗಿಟ್ಟುಕೊಂಡು ಪ್ರಕರಣ ದಾಖಲಿಸಿದ್ದಾರೆ. ಅವರು ತನ್ನ ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದರು ಮತ್ತು ತನ್ನ ಸಾಲವನ್ನು ತೀರಿಸಲು ಈ ಹಣವನ್ನು ಬಳಸಲು ಇತರ ಶೂ ವ್ಯಾಪಾರಿಗಳಿಗೆ ಮೋಸ ಮಾಡುವ ಸಲುವಾಗಿ ನಕಲಿ ದರೋಡೆ ಪ್ರಕರಣ ದಾಖಲಿಸಿದ್ದಾಗಿ ಅವರು ಹೇಳಿದರು.

32 ವರ್ಷದ ಶೂ ವ್ಯಾಪಾರಿಯನ್ನು ಕಾಟನ್‌ಪೇಟೆ ನಿವಾಸಿ ಮುಲಾರಾಮ್ ಎಂದು ಗುರುತಿಸಲಾಗಿದೆ. ಈ ಕುರಿತು ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಅವರು, ಜ. 13 ರಂದು ಮೈಸೂರು ರಸ್ತೆಯ ಮೇಲ್ಸೇತುವೆಯ ಕೆಳಗೆ ಇಬ್ಬರು ದರೋಡೆಕೋರರು ತಮ್ಮ ಮೇಲೆ ದಾಳಿ ಮಾಡಿದ್ದಾರೆ. ಬ್ಲೇಡ್‌ನಿಂದ ತಾನೇ ಗಾಯ ಮಾಡಿಕೊಂಡ ನಂತರ, ದಾಳಿಕೋರರಿಬ್ಬರು 10 ಲಕ್ಷ ರೂಪಾಯಿ ಹಣದೊಂದಿಗೆ ಪರಾರಿಯಾಗಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದರು.

ಆರೋಪಿಯು ತನ್ನ ಬಳಿ ಆರ್ಡರ್ ಮಾಡಿದ ಇತರ ಶೂ ಡೀಲರ್‌ಗಳಿಂದ ಹಣವನ್ನು ಸಂಗ್ರಹಿಸಿದ್ದ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ ಪೊಲೀಸರು, ಆತನ ಚಪ್ಪಲಿ ಅಂಗಡಿಯಲ್ಲಿದ್ದ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಜನವರಿ 10ರಂದು ಮತ್ತೊಂದು ದರೋಡೆ ನಡೆದಿದ್ದು, ನಾಲಾ ರಸ್ತೆಯಲ್ಲಿ ಜ್ಯುವೆಲರ್ ವರುಣ್ ಸಿಂಗ್ ಪನ್ವಾರ್ ಮತ್ತು ಕೃಷ್ಣಪ್ಪ ಎಂಬುವವರನ್ನು ದರೋಡೆ ಮಾಡಿದ ತಂಡ 85 ಲಕ್ಷ ರೂಪಾಯಿ ನಗದು ದೋಚಿ ಪರಾರಿಯಾಗಿದೆ. ಆದರೆ, ಪನ್ವಾರ್ ಅವರು ತಮ್ಮ ದೂರಿನಲ್ಲಿ ಸಂಬಂಧಪಟ್ಟ ಏಜೆನ್ಸಿಗಳ ನೋಟಿಸ್‌ಗೆ ಹೆದರಿ ಕೇವಲ 10 ಲಕ್ಷ ರೂ. ಎಂದು ತಿಳಿಸಿದ್ದರು.

ಬಂಧಿತರನ್ನು ಎಚ್ ಸಿದ್ದಯ್ಯ ರಸ್ತೆಯ ಮಹಮ್ಮದ್ ಜಿಲಾನ್ (27), ಶಿವಾಜಿನಗರದ ಅಬ್ದುಲ್ ವಹಾಬ್ ಅಲಿಯಾಸ್ ಕುಮಾರ್ (35) ಮತ್ತು ಮಹಾಲಿಂಗೇಶ್ವರ ಲೇಔಟ್‌ನ ಪೃಥ್ವಿಕ್ (20) ಎಂದು ಗುರುತಿಸಲಾಗಿದೆ. ಮತ್ತೋರ್ವ ಆರೋಪಿ ಹುಸೇನ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಆರೋಪಿಗಳಿಂದ ಪೊಲೀಸರು 72 ಲಕ್ಷ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ. ಕಲಾಸಿಪಾಳ್ಯ ಮತ್ತು ಚಾಮರಾಜಪೇಟೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

SCROLL FOR NEXT