ರಾಜ್ಯ

ರಾಜ್ಯ ಸರ್ಕಾರಿ ನೌಕರರಿಗೊಂದು ಸಿಹಿ ಸುದ್ದಿ: ಸೇನಾ ಕ್ಯಾಂಟೀನ್ ನಂತೆಯೇ ಶೀಘ್ರದಲ್ಲೇ ಮಾರ್ಟ್ ಆರಂಭ!

Manjula VN

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಪಾಕೆಟ್ ಸ್ನೇಹಿ ಸುದ್ದಿಯೊಂದು ಇಲ್ಲಿದೆ. ರಾಜ್ಯ ಸರ್ಕಾರಿ ನೌಕರರ ಸಂಘವು ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಪ್ರತ್ಯೇಕ ಫ್ಯಾಮಿಲಿ ಮಾರ್ಟ್ ವೊಂದನ್ನು ಆರಂಭಿಸುತ್ತಿದ್ದು, ಶೇ.10-60ರಷ್ಟು ರಿಯಾಯಿತಿಯಲ್ಲಿ ಸರ್ಕಾರಿ ನೌಕರರು ಅಗತ್ಯ ವಸ್ತುಗಳು ಮತ್ತು ದಿನಸಿ ಸಾಮಾಗ್ರಿಗಳನ್ನು ಖರೀದಿಸಬಹುದಾಗಿದೆ.

ಸರ್ಕಾರಿ ನೌಕರರ ಸಂಘವು ಆರಂಭಿಸುತ್ತಿರುವ ಈ ಮಾರ್ಟ್, ಕ್ಯಾಂಟೀನ್ ಸ್ಟೋರ್ಸ್ ಡಿಪಾರ್ಟ್ಮೆಂಟ್ (CSD) ರಂತೆಯೇ ಇರುತ್ತದೆ, ದಿನಸಿ ವಸ್ತುಗಳು, ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಇತರ ವಸ್ತುಗಳು ಸೇರಿದಂತೆ ದೈನಂದಿನ ಬಳಕೆಗೆ ಗುಣಮಟ್ಟದ ಉತ್ಪನ್ನಗಳು ಈ ಮಾರ್ಟ್‌ನಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿರುತ್ತವೆ.

ಪ್ರಸ್ತುತ, ರಾಜ್ಯ ಸರ್ಕಾರವು ಕೃಷಿ, ಗೃಹ, ನಗರಾಭಿವೃದ್ಧಿ, ಆರೋಗ್ಯ, ಪ್ರವಾಸೋದ್ಯಮ, ಶಿಕ್ಷಣ, ಆಹಾರ ಮತ್ತು ನಾಗರಿಕ ಸರಬರಾಜು ಸೇರಿದಂತೆ 72 ಇಲಾಖೆಗಳಲ್ಲಿ 5.2 ಲಕ್ಷ ಸರ್ಕಾರಿ ನೌಕರರನ್ನು ಹೊಂದಿದ್ದು, ಮಾಜಿ ನೌಕರರು ಅವರ ಪತ್ನಿಯಂದಿರು ಕೂಡ ಈ ಮಾರ್ಟ್'ನ್ನು ಬಳಕೆ ಮಾಡಬಹುದಾಗಿದೆ.

ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಮಾತನಾಡಿ, ಶಿವಮೊಗ್ಗದಲ್ಲಿ ಮೊದಲ ಮಾರ್ಟ್ ಉದ್ಘಾಟನೆಯಾಗಲಿದೆ. ಫೆ.4ರಂದು ರಾಜ್ಯಮಟ್ಟದ ಸರ್ಕಾರಿ ನೌಕರರ ಸಮಾವೇಶ ಆಯೋಜಿಸಿದ್ದು, ಇದೇ ಸಂದರ್ಭದಲ್ಲಿ ಮಾರ್ಟ್ ಉದ್ಘಾಟನೆಗೊಳ್ಳಲಿದೆ. ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಇದೇ ರೀತಿಯ ಮಾರ್ಟ್‌ಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.

ಸರ್ಕಾರಿ ಜಾಗದಲ್ಲಿ ಮಾರ್ಟ್ ಗಳನ್ನು ಸ್ಥಾಪಿಸಲಾಗುತ್ತಿದ್ದು, ಖಾಸಗಿ ಸಂಸ್ಥೆಗಳು ಇವುಗಳನ್ನು ನಿರ್ವಹಿಸಲಿವೆ. ಇಲ್ಲಿನ ಉತ್ಪನ್ನಗಳು ಸಿಬ್ಬಂದಿಗೆ ಕೈಗೆಟುಕುವ ದರದಲ್ಲಿ ಲಭ್ಯವಿರುತ್ತವೆ. ಹೆಚ್ಚಿನ ಸಂಖ್ಯೆಯ ಸರ್ಕಾರಿ ನೌಕರರು ವಸ್ತುಗಳನ್ನು ಖರೀದಿಸಲು ಇಲ್ಲಿಗೆ ಬರುವುದರಿಂದ, ಮಾರ್ಟ್ ಗಳನ್ನು ನಡೆಸುವ ಖಾಸಗಿ ಸಂಸ್ಥೆಗೆ ಇದು ಆರ್ಥಿಕವಾಗಿ ಸಹಾಯ ಮಾಡಿದಂತಾಗುತ್ತದೆ ಎಂದು ತಿಳಿಸಿದ್ದಾರೆ.

ಮಾರ್ಟ್‌ಗಳನ್ನು ಸ್ಥಾಪಿಸಲು ಪ್ರತಿ ಜಿಲ್ಲೆಯಲ್ಲೂ ಭೂಮಿಯನ್ನು ಪಡೆದುಕೊಳ್ಳುವ ಕೆಲಸಗಳಾಗುತ್ತಿದೆ. ಬೆಂಗಳೂರಿನಲ್ಲಿ ನಾಲ್ಕು ಮಾರ್ಟ್ ಗಳ ಸ್ಥಾಪನೆಯ ಅಗತ್ಯವಿದೆ. ಆದರೆ, ಇದಕ್ಕೆ ಮುಖ್ಯ ಸಮಸ್ಯೆಯೇ ಭೂಮಿಯ ಲಭ್ಯತೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಪ್ರತಿ ದಿಕ್ಕಿನಲ್ಲಿ ಮಾರ್ಟ್‌ಗಳನ್ನು ಸ್ಥಾಪಿಸಲಾಗುವುದು, ಇದರಿಂದ ಸಿಬ್ಬಂದಿಗಳಿಗೆ ಖರೀದಿಸಲು ಅನುಕೂಲವಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

SCROLL FOR NEXT