ಬೆಂಗಳೂರು: ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿರುವ ದುಷ್ಕರ್ಮಿಗಳು, ಮೃತದೇಹವನ್ನು ಸುಟ್ಟು ಪರಾರಿಯಾಗಿರುವ ಘಟನೆ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಚೆನ್ನನಾಯಕನಹಳ್ಳಿಯಲ್ಲಿ ನಡೆದಿದೆ,
ಮೃತ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಭಾನುವಾರ ಬೆಳಗ್ಗೆ ಚೆನ್ನನಾಯಕನಹಳ್ಳಿಯ ನಿರ್ಜನ ಸ್ಥಳದಲ್ಲಿ ಅರೆಬರೆ ಬೆಂದ ಮೃತದೇಹ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
‘ಮೃತ ವ್ಯಕ್ತಿಗೆ 40 ವರ್ಷ ವಯಸ್ಸಾಗಿರಬಹುದೆಂದು ಅಂದಾಜಿಸಲಾಗಿದೆ. ಹೆಸರು ಹಾಗೂ ವಿಳಾಸ ಗೊತ್ತಾಗಿಲ್ಲ. ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಸ್ಥಳಕ್ಕೆ ಭೇಟಿ ನೀಡಿ, ಮಾದರಿಗಳನ್ನು ಸಂಗ್ರಹಿಸಿದ್ದಾರೆ. ವರದಿ ಬಂದ ಬಳಿಕ ಮತ್ತಷ್ಟು ಮಾಹಿತಿ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವ್ಯಕ್ತಿಯನ್ನು ಬೇರೆಡೆ ಹತ್ಯೆ ಮಾಡಿ, ಶವವನ್ನು ಚೆನ್ನನಾಯಕನಹಳ್ಳಿಯಲ್ಲಿ ಎಸೆದು ಹೋಗಿರುವ ಶಂಕೆಗಳಿವೆ. ಮೃತ ವ್ಯಕ್ತಿಯ ಗುರುತು ಪತ್ತೆಯಾಗಬಾರದು ಎಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಘಟನೆ ಸಂಬಂಧ ಪೀಣ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.