ರಾಜ್ಯ

'ಅನ್ನ ಭಾಗ್ಯ' ಯೋಜನೆಗೆ ಸಿಎಂ ಸಿದ್ದರಾಮಯ್ಯ ಜು.10ರಂದು ವಿಧಾನ ಸೌಧದಲ್ಲಿ ಅಧಿಕೃತ ಚಾಲನೆ

Sumana Upadhyaya

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಜನತೆಗೆ ನೀಡಿರುವ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಈಗಾಗಲೇ ಜಾರಿಗೆ ಬಂದಿದ್ದು, ಅನ್ನ ಭಾಗ್ಯ(Anna Bhagya) ಯೋಜನೆಗೆ ಇದೇ ಜುಲೈ 10ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಚಾಲನೆ ನೀಡಲಿದ್ದಾರೆ.

ಜುಲೈ 10ರಂದು ವಿಧಾನ ಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅನ್ನ ಭಾಗ್ಯ ಯೋಜನೆಗೆ ಚಾಲನೆ ನೀಡಿದ ನಂತರ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅನ್ನ ಭಾಗ್ಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

ಅನ್ನ ಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ಕೇಂದ್ರ ಸರ್ಕಾರದಿಂದ ಅಕ್ಕಿ ದೊರೆಯದ ಕಾರಣ ಈಗಾಗಲೇ ವಿತರಿಸುತ್ತಿರುವ 5 ಕೆಜಿ ಜೊತೆಗೆ ತಾತ್ಕಾಲಿಕವಾಗಿ ಕೆಜಿಗೆ 34 ರೂಪಾಯಿಗಳಂತೆ 5ಕೆಜಿಗೆ 170 ರೂಗಳಂತೆ ಪ್ರತಿ ವ್ಯಕ್ತಿಯ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ವರ್ಗಾಯಿಸುವುದಾಗಿ ಸರ್ಕಾರ ಪ್ರಕಟಿಸಿದೆ. ಜುಲೈ 10ರಂದು ಅಕ್ಕಿ ಪೂರೈಕೆ ಜೊತೆಗೆ ಹಣವನ್ನು ಫಲಾನುಭವಿಗಳ ಖಾತೆಗೆ ಹಾಕುವ ಪ್ರಕ್ರಿಯೆ ಸರ್ಕಾರದಿಂದ ಆರಂಭವಾಗಲಿದೆ.

ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಕಡ್ಡಾಯ: ಈ ಹಣ ನೇರವಾಗಿ ಕುಟುಂಬದ ಯಜಮಾನನ ಖಾತೆಗೆ ಜಮೆಯಾಗುತ್ತದೆ. ಹಣಕ್ಕೆ ಆಧಾರ್ ಲಿಂಕ್ (Aadhaar Card Link) ಕಡ್ಡಾಯವಾಗಿರುತ್ತದೆ. ಅನ್ನಭಾಗ್ಯದ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಆಗಬೇಕಾದರೆ ಬ್ಯಾಂಕ್ ಖಾತೆ (Bank Account) ಜೊತೆ ಆಧಾರ್ ಲಿಂಕ್ ಕಡ್ಡಾಯವಾಗಿ ಆಗಿರಬೇಕು. ಪಡಿತರ ಚೀಟಿಯಲ್ಲಿ (Ration Card) ಮನೆ ಮುಖ್ಯಸ್ಥರು ಯಾರು ಎಂಬುದು ಕಾರ್ಡ್ ನಲ್ಲಿ ನಮೂದಾಗಿರುತ್ತದೆ. ಮನೆಯ ಮುಖ್ಯಸ್ಥರು ಸಾಮಾನ್ಯವಾಗಿ ಮಹಿಳೆಯರೇ ಆಗಿರುತ್ತಾರೆ. ಮನೆ ಯಜಮಾನಿಯ ಹೆಸರಿನಲ್ಲಿ ಬ್ಯಾಂಕ್ ಅಕೌಂಟ್ ಖಾತೆ ಇರಬೇಕು.

ಅಲ್ಲದೆ ಒಂದು ವೇಳೆ ಮನೆಯ ಮುಖ್ಯಸ್ಥರದ್ದು ಇಲ್ಲದೇ ಹೋದಲ್ಲಿ, ಪಡಿತರ ಚೀಟಿಯಲ್ಲಿರುವ ಯಾರಾದರೂ ಒಬ್ಬರ ಹೆಸರಿನಲ್ಲಿ ಖಾತೆ ಆಧಾರ್(Adhar card) ಲಿಂಕ್ ಆಗಿರಬೇಕು ಎಂದು ಸರ್ಕಾರ ಹೇಳಿದೆ. ಇನ್ನು ಈ ಧನಭಾಗ್ಯಕ್ಕಾಗಿ ಪ್ರತ್ಯೇಕ ಅರ್ಜಿ ಸಲ್ಲಿಕೆ ಮಾಡಬೇಕಿಲ್ಲ. ಆದರೆ ಆಧಾರ್ ಲಿಂಕ್ಡ್ ಬ್ಯಾಂಕ್ ಖಾತೆ ವಿವರ ಮಾತ್ರ ಕಡ್ಡಾಯವಾಗಿರುತ್ತದೆ. 

SCROLL FOR NEXT