ರಾಜ್ಯ

'ಅವಳಲ್ಲ.. ಅವನು': ಬುರ್ಖಾ ತೊಟ್ಟು ಉಚಿತ ಪ್ರಯಾಣ?, ಬಸ್ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಪುರುಷ!

Srinivasamurthy VN

ಧಾರವಾಡ: ರಾಜ್ಯ ಸರ್ಕಾರದ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವಂತೆಯೇ ಇತ್ತ ಇಲ್ಲೊಬ್ಬ ವ್ಯಕ್ತಿ ಉಚಿತವಾಗಿ ಪ್ರಯಾಣಿಸಲು ಬುರ್ಖಾ ಧರಿಸಿ ನಿಲ್ದಾಣಕ್ಕೆ ಆಗಮಿಸಿ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ.

ಹೌದು.. ರಾಜ್ಯ ಸರ್ಕಾರದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಯೋಜನೆ ಬಗ್ಗೆ ಎಷ್ಟೋ ಪರ ವಿರೋಧ ಚರ್ಚೆಗಳು ನಡೆಯುತ್ತಿರುವಂತೆಯೇ ಲಕ್ಷಾಂತರ ಮಹಿಳೆಯರು ಈ ಯೋಜನೆಯ ಉಪಯೋಗವನ್ನು ಪ್ರತಿದಿನ ಪಡೆದುಕೊಳ್ಳುತ್ತಿದ್ದಾರೆ. ಅಂತೆಯೇ ಸಾಕಷ್ಟು ಅವಘಡಗಳು ಕೂಡ ನಡೆಯುತ್ತಿದ್ದು, ಗಲಾಟೆ, ಸೀಟಿಗಾಗಿ ಸಂಘರ್ಷದಂತಹ ಪ್ರಕರಣಗಳು ವರದಿಯಾಗುತ್ತಿರುವ ಬೆನ್ನಲ್ಲೇ ಧಾರವಾಡದಲ್ಲಿ ಒಂದು ವಿಚಿತ್ರ ಘಟನೆ ವರದಿಯಾಗಿದೆ.

ಇಲ್ಲೊಬ್ಬ ವ್ಯಕ್ತಿ ಉಚಿತವಾಗಿ ಪ್ರಯಾಣಿಸಲು ಬುರ್ಖಾ ಧರಿಸಿ ನಿಲ್ದಾಣಕ್ಕೆ ಆಗಮಿಸಿ ಸಿಕ್ಕಿಬಿದ್ದಿದ್ದಾರೆ. ಧಾರವಾಡದ ಸಂಶಿ ಬಸ್ ನಿಲ್ದಾಣದ ಬಳಿ ಬುರ್ಖಾ ತೊಟ್ಟು ಮಹಿಳೆಯೊಬ್ಬರು ಕುಳಿತಿದ್ದರು. ಆದರೆ ಅಲ್ಲೇ ಸುತ್ತಮುತ್ತಲು ಓಡಾಡುತ್ತಿದ್ದವರಿಗೆ ಮಹಿಳೆಯ ಬಗ್ಗೆ ಸಂಶಯದ ಸುಳಿಯೊಂದು ಹುಟ್ಟಿಕೊಂಡಿದೆ. ಹೀಗಾಗಿ ಕೆಲವರು ಒಟ್ಟಾಗಿ ಬುರ್ಖಾಧಾರಿಯ ಬಳಿ ಬುರ್ಖಾ ತೆಗೆದು ಮುಖ ತೋರಿಸುವಂತೆ ಹೇಳಿದ್ದಾರೆ. ಆದರೆ ಆರಂಭವದಲ್ಲಿ ಅವರು ಬುರ್ಖಾ ತೆಗೆಯಲು ಒಪ್ಪಿಲ್ಲ. ಬಳಿಕ ವಾಗ್ವಾದ ನಡೆದು ಅಲ್ಲಿ ನೆರೆದಿದ್ದವರ ಒತ್ತಾಯದ ಮೇರೆಗೆ ಅವರು ಬುರ್ಖಾ ತೆಗೆದಿದ್ದು ಈ ವೇಳೆ ಬುರ್ಖಾದಲ್ಲಿರುವುದು 'ಅವಳಲ್ಲ.. ಅವನು' ಎಂಬುದು ಗೊತ್ತಾಗಿದೆ.

ಇಂದು (ಜುಲೈ 6) ಬೆಳಗ್ಗೆ ಈ ವಿಚಿತ್ರ ಘಟನೆ ನಡೆದಿದ್ದು, ಬುರ್ಖಾಧಾರಿ ವ್ಯಕ್ತಿ ಬೆಂಗಳೂರಿನ ಮೂಲಕ ಹುಬ್ಬಳ್ಳಿಗೆ ಪ್ರಯಾಣಿಸುತ್ತಿದ್ದ ಎನ್ನಲಾಗಿದೆ. ಈ ವ್ಯಕ್ತಿಯನ್ನು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕು ಘೋಡಗೋರಿಯ ನಿವಾಸಿ ವೀರಭದ್ರಯ್ಯ ನಿಂಗಯ್ಯ ಮಠಪತಿ ಎಂದು ಆತನ ಬಳಿಯಿದ್ದ ಆಧಾರ್ ಕಾರ್ಡ್ ಮೂಲಕ ಪತ್ತೆಯಾಗಿದೆ. ವೀರಭದ್ರಯ್ಯ ಬಳಿ ಮಹಿಳೆಯ ಆಧಾರ್ ಕಾರ್ಡ್ ಝರಾಕ್ಸ್ ಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.  

ಉಚಿತ ಬಸ್ ಪ್ರಯಾಣಕ್ಕಾಗಿ ಈ ರೀತಿ ಮಹಿಳೆಯರಂತೆ ವೇಷ ತೊಟ್ಟಿರುವ ಕುರಿತು ಸಾರ್ವಜನಿಕರು ತರಾಟೆ ತೆಗೆದುಕೊಂಡಿದ್ದಾರೆ. ಆದರೆ ತಾನು ಭಿಕ್ಷಾಟನೆಗಾಗಿ ಈ ರೀತಿ ವೇಷ ತೊಟ್ಟಿರುವುದಾಗಿ ವೀರಭದ್ರಪ್ಪ ಹೇಳಿಕೊಂಡಿದ್ದಾನೆ. ಕುಂದಗೋಳ ಪೊಲೀಸರು ಬುರ್ಖಾಧಾರಿ ಪುರುಷನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
 

SCROLL FOR NEXT